ರಸ್ತೆಯಲ್ಲಿ ಟ್ಯಾಂಕ್ ನಿರ್ಮಾಣಕ್ಕೆ ಸ್ಥಳೀಯರ ವಿರೋಧ

20 mdg 1
ಮೂಡಿಗೆರೆ ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿ ಕುಡಿಯುವ ನೀರಿನ ಸಿಸ್ಟನ್ ಗಾಗಿ ರಸ್ತೆಯಲ್ಲಿ ತಳಪಾಯ ನಿರ್ಮಿಸಿರುವುದು.
Published on

ಮೂಡಿಗೆರೆ: ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿ 2 ಸಾವಿರ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವ ಜತೆಗೆ ಪಕ್ಕದ ನಿವೇಶನಕ್ಕೆ ತೆರಳುವ ರಸ್ತೆಯನ್ನು ಮುಚ್ಚಿದಂತಾಗಿದೆ.

ಪಟ್ಟಣ ಪಂಚಾಯಿತಿ ಅನುದಾನದಲ್ಲಿ ಟ್ಯಾಂಕ್ ನಿರ್ಮಾಣ ಕಾಮಗಾರಿ ನಡೆದಿದೆ. ರೆಡಿಮೇಡ್ ಟ್ಯಾಂಕ್ ಅಳವಡಿಸಲು ಕಳೆದ ತಿಂಗಳು ರಸ್ತೆಯಲ್ಲೆ ತಳಪಾಯ ಕಾಮಗಾರಿ ನಡೆದಿದೆ. ತಳಪಾಯ ನಿರ್ಮಿಸಿದ ಸ್ಥಳದಲ್ಲಿ ಹಳೆಯ ಕೊಳವೆ ಬಾವಿಯಿದ್ದು ಅದರ ಪಕ್ಕದಲ್ಲಿ ಹೈಮಾಸ್ಟ್ ದೀಪದ ಕಂಬವಿದೆ. ಕೊಳವೆ ಬಾವಿಗೆ ಪಂಪ್‌ಸೆಟ್ ಅಳವಡಿಸಿ ಹೊಸ ಟ್ಯಾಂಕಿಗೆ ನೀರು ತುಂಬುವ ಯೋಜನೆಯನ್ನು ಪಪಂ ಆಡಳಿತ ರೂಪಿಸಿದೆ. ಆದರೆ ಕೊಳವೆ ಬಾವಿ ತೀರಾ ಹಳೆಯರಾಗಿರುವುದರಿಂದ ಅದರಲ್ಲಿರುವ ನೀರು ಕುಡಿಯಲು ಯೋಗ್ಯ ಸ್ಥಿತಿಯಲ್ಲಿಲ್ಲ. ಬಳಕೆಗೆ ಸಾಧ್ಯವಿಲ್ಲದ ಕೊಳವೆ ಬಾವಿಯನ್ನು ನಂಬಿ ಪಪಂ ಆಡಳಿತದಿಂದ ರಸ್ತೆಯಲ್ಲೆ ಟ್ಯಾಂಕ್ ನಿರ್ಮಿಸಲು ಹೊರಟಿರುವ ಕ್ರಮಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.

ಮಾರ್ಕೆಟ್ ರಸ್ತೆ ಬಡಾವಣೆಗೆ ಪಪಂನಿಂದ ಕುಡಿಯುವ ನೀರಿನ ವ್ಯವಸ್ಥೆಯಿದೆ. 2 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತದೆ. ಕುಡಿಯುವ ನೀರಿನ ಅಮೃತ್ ಮಿತ್ರ ಯೋಜನೆಯಲ್ಲಿ ಸರ್ಕಾರದಿಂದ 19 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಪಟ್ಟಣದ ಎಲ್ಲ ಬಡಾವಣೆಗಳ ಕಾಂಕ್ರಿಟ್ ರಸ್ತೆಯನ್ನು ಅಗೆದು ಚರಂಡಿ ನಿರ್ಮಿಸಿ ಪೈಪ್ ಅಳವಡಿಸಲಾಗಿದೆ. ಪಪಂ ಕಚೇರಿ ಆವರಣದಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ದಿನದ 24 ಗಂಟೆ ಪ್ರತಿ ಮನೆಗೆ ನಿರಂತರವಾಗಿ ನಲ್ಲಿ ಮೂಲಕ ನೀರು ಪೂರೈಕೆ ಮಾಡಲು ಕಾಮಗಾರಿ ನಡೆಯುತ್ತಿದೆ. ಪ್ರತಿಮನೆಯ ನಲ್ಲಿಗೆ ಮೀಟರ್ ಅಳವಡಿಸಿ ನೀರು ಉಪಯೋಗಿಸುವ ಪ್ರಮಾಣದಲ್ಲಿ ಅದರ ಮೊತ್ತವನ್ನು ವಸೂಲಿ ಮಾಡಲು ಪಪಂ ಚಿಂತನೆ ನಡೆಸಿದೆ. ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರೊದಗಿಸಲು ಇಷ್ಟೆಲ್ಲ ವ್ಯವಸ್ಥೆಯಿದ್ದರೂ ರಸ್ತೆಯಲ್ಲಿ ಕುಡಿಯುವ ನೀರಿನ ಸಿಸ್ಟನ್ ನಿರ್ಮಿಸುವ ಅಗತ್ಯವೇನಿದೆ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net