

ಕಡೂರು: ತಾಲೂಕಿನ ಕಡೂರು-ಬೀರೂರು ಪಟ್ಟಣಗಳಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಿಂದ ಮುಕ್ತಿ ಪಡೆದು ಈಗ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರ್ಪಡೆಯಾಗಿರುವ ರಸ್ತೆಗೆ ಮರು ಡಾಂಬರೀಕರಣ ಕಾಮಗಾರಿ ನಡೆಯಲಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ತಾಲೂಕಿನ ತಂಗಲಿ ಸಮೀಪ ಬೈಪಾಸ್ ರಸ್ತೆಯಲ್ಲಿ ಬುಧವಾರ 5.90 ಕೋಟಿ ರೂ. ವೆಚ್ಚದ ಮರು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ ಬೈಪಾಸ್ ನಂತರ ಕಡೂರು ಪಟ್ಟಣದಿಂದ ಬೀರೂರು ಮೂಲಕ ಎರಡನೇ ರೈಲ್ವೆ ಗೇಟ್ ತನಕ ಈ ರಸ್ತೆ ದುರಸ್ತಿ ಕಾಣದೆ ಗುಂಡಿಗಳಿಂದ ತುಂಬಿ ಹೋಗಿದ್ದು ಅನೇಕ ಅಪಘಾತಗಳು ಸಂಭವಿಸಿದ್ದವು. ಸಾರ್ವಜನಿಕರಿಂದಲೂ ಒತ್ತಡ ಹೆಚ್ಚಾಗಿತ್ತು. ಅಲ್ಲದೆ ಕಡೂರು ಪಟ್ಟಣಕ್ಕೆ ಗ್ರಾಮೀಣ ಭಾಗಗಳಿಂದ ಬರುವ ಸಾವಿರಾರು ಜನರಿಗೆ ಮುಖ್ಯ ರಸ್ತೆಯಾಗಿರುವುದರಿಂದ ದುರಸ್ತಿಗೆ ಮೊದಲ ಆದ್ಯತೆ ನೀಡಿ ಇದೀಗ 11.8 ಕಿ.ಮೀ. ರಸ್ತೆ ಮರು ಡಾಂಬರೀಕರಣದ ಕಾಮಗಾರಿ ನಡೆಯಲಿದೆ. ಪ್ರಸ್ತುತ ಈ ರಸ್ತೆಯು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರಿರುವುದರಿಂದ ಮುಂದಿನ ದಿನಗಳಲ್ಲಿ 10 ಮೀಟರ್‌ಗೆ ರಸ್ತೆ ವಿಸ್ತರಣೆ ಮಾಡುವ ಆಲೋಚನೆ ಇದೆ ಎಂದರು.
ತಂಗಲಿ ಗ್ರಾಪಂ ಅಧ್ಯಕ್ಷ ರಮೇಶ್, ಮಾಜಿ ಅಧ್ಯಕ್ಷರಾದ ರಘು, ಗಿರೀಶ್, ಗೋವಿಂದಪ್ಪ, ನಾರಾಯಣನಾಯ್ಕ, ಪಾಂಡಣ್ಣ, ಕುಮಾರ್, ಸುನೀಲ್, ಲೋಕೋಪಯೋಗಿ ಇಲಾಖೆಯ ಎಇಇ ಬಸವರಾಜ ನಾಯ್ಕ, ಗುತ್ತಿಗೆದಾರ ಚೌಳಹಿರಿಯೂರು ಹಾಲಪ್ಪ ಹಾಗೂ ಗ್ರಾಮಸ್ಥರು ಇದ್ದರು.