ರಸ್ತೆ ವಿಸ್ತರಣೆಯಾಗದೆ ಸಂಚಾರ ದುಸ್ತರ

25 BIRUR 01 road
ಬೀರೂರು ಪಟ್ಟಣದಿಂದ ಹಾದು ಹೋಗಿರುವ ಅಜ್ಜಂಪುರ ರಸ್ತೆ ಕೆಶಿಪ್‌ಯಿಂದ ವಿಸ್ತರಣೆಯಾದರೂ ಕಿರಿದಾಗಿರುವುದು.
Published on

ರಾಜು ಎಂ. ಬೀರೂರು: ರಾಜ್ಯ ಹೆದ್ದಾರಿಯಾದರೂ ಸಮರ್ಪಕವಾಗಿ ವಿಸ್ತರಣೆಯಾಗದ ರಸ್ತೆ ಮತ್ತು ಪಾದಚಾರಿ ಮಾರ್ಗ, ಪಾಲನೆಯಾಗದ ಸಂಚಾರ ನಿಯಮಗಳಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡುವಂತಾಗಿದೆ.

ಪಟ್ಟಣದಿಂದ ಅಜ್ಜಂಪುರ ಮತ್ತು ಲಿಂಗದಹಳ್ಳಿಗೆ ತೆರಳುವ ಮುಖ್ಯ ರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿ ರಸ್ತೆ ಅಭಿವೃದ್ಧಿ ಮಾಡಿ ದಾವಣಗೆರೆಗೆ ಸಂಪರ್ಕ ಕಲ್ಪಿಸಲಾಗಿದೆ. ಹೀಗಾಗಿ ಪ್ರತಿದಿನ ನೂರಾರು ಭಾರಿ ವಾಹನಗಳು ಹಾಗೂ ಲಘು ವಾಹನಗಳು ಸಂಚರಿಸುತ್ತವೆ. ಆದರೆ ಕಟ್ಟುನಿಟ್ಟಿನ ಸಂಚಾರ ನಿಯಮ ಜಾರಿಯಾಗದ ಕಾರಣ ಟ್ರಾಫಿಕ್ ಸಮಸ್ಯೆ ತೀವ್ರವಾಗಿದೆ. 2017-18ರಲ್ಲಿ ಆರಂಭವಾದ ಅಜ್ಜಂಪುರ ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿ ಕಿಂಚಿತ್ತೂ ಪ್ರಗತಿ ಕಾಣಲಿಲ್ಲ. ಪಾದಚಾರಿ ಮಾರ್ಗವೂ ಪಾದಚಾರಿಗಳಿಗೆ ಸಿಗಲಿಲ್ಲ. ಬದಲಾಗಿ ವಿಸ್ತರಣೆ ವೇಳೆ ಕೆಶಿಪ್‌ಯಿಂದ ಭೂಸ್ವಾಧೀನಕ್ಕೆ ಒಳಪಟ್ಟ ಮಾಲೀಕರಿಗೆ ಪರಿಹಾರ ನೀಡಿತು. ಕೆಶಿಪ್‌ನವರು ಇರುವ ರಸ್ತೆಗೆ ಡಾಂಬರೀಕರಣ ಹಾಗೂ ಇಕ್ಕೆಲಗಳಲ್ಲಿ ಸಣ್ಣದಾದ ಬಾಕ್ಸ್ ಚರಂಡಿ ನಿರ್ಮಿಸಿ ಕೈ ತೊಳೆದುಕೊಂಡರು. ಪರಿಹಾರ ಪಡೆದ ಭೂ ಮಾಲೀಕರು ಮತ್ತೆ ಆ ಜಾಗದಲ್ಲೇ ಗ್ಯಾರೇಜ್, ್ಯಾನ್ಸಿಸ್ಟೋರ್, ಹೋಟೆಲ್ ಸೇರಿದಂತೆ ಸಣ್ಣಪುಟ್ಟ ಗೂಡಂಗಡಿಗಳಿಂದ ದೊಡ್ಡಮಟ್ಟದ ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಆ ಅಂಗಡಿಗಳಿಗೆ ಬರುವ ಗ್ರಾಹಕರು ರಸ್ತೆಯಲ್ಲಿಯೇ ಅಡ್ಡಾದಿಡ್ಡಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಾರೆ. ಹೀಗಾಗಿ ಜನರು ರಸ್ತೆ ಮಧ್ಯೆಯೇ ಓಡಾಡುತ್ತಿದ್ದು ವಾಹನ ದಟ್ಟಣೆ ಹೆಚ್ಚಾಗಿ ಸಂಚಾರ ದುಸ್ತರವಾಗಿದೆ. ಅಲ್ಲದೆ ಆಗಾಗ ತುಂಬಿ ಹರಿಯುವ ಯುಜಿಡಿ ಗುಂಡಿಗಳಿಂದಲೂ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ಟ್ರಾಫಿಕ್ ಪೊಲೀಸ್ ನಿಯೋಜಿಸಿ: ಬಿ.ಎಚ್.ರಸ್ತೆಯಲ್ಲೂ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ತಾಲೂಕಿನ ದೊಡ್ಡ ಹೋಬಳಿ ಕೇಂದ್ರವಾಗಿರುವುದರಿಂದ ಸುತ್ತಮುತ್ತಲ ಗ್ರಾಮ ಮತ್ತು ಪಟ್ಟಣದ ಜನರ ಅನುಕೂಲಕ್ಕಾಗಿ ಪ್ರತಿ ಶನಿವಾರ ವಾರದ ಸಂತೆ ನಡೆಯುತ್ತದೆ. ಗ್ರಾಮಗಳಿಂದ ದ್ವಿಚಕ್ರ ಮತ್ತು ಆಟೋಗಳಲ್ಲಿ ಆಗಮಿಸುವ ಜನತೆ ರಸ್ತೆಯ ಎರಡು ಬದಿಗಳಲ್ಲಿ ಪಾರ್ಕಿಂಗ್ ಮಾಡುತ್ತಾರೆ. ಇದರಿಂದ ಬಸ್ ಸೇರಿದಂತೆ ದೊಡ್ಡ ವಾಹನಗಳಿಗೆ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಕೆಲವೊಮ್ಮೆ ಆಂಬುಲೆನ್ಸ್ ಸಹ ಟ್ರಾಫಿಕ್‌ನಲ್ಲಿ ಸಿಲುಕುವಂತಾಗಿದೆ. ಇದರ ಮಧ್ಯೆ ಬೆಳಗ್ಗೆ, ಸಂಜೆ ಶಾಲಾ ವಾಹನಗಳು, ಆಟೋ, ಟ್ರಾೃಕ್ಟರ್ ಚಾಲಕರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಮತ್ತು ಶಾಲಾ ಮಕ್ಕಳನ್ನು ಹತ್ತಿಸುವುದು, ಇಳಿಸುವುದು ಮಾಡುತ್ತಿದ್ದು ಇದು ಸುರಕ್ಷತೆ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ನಿತ್ಯ ಗಣಪತಿ ಪೆಂಡಾಲ್ ಮುಂಭಾಗ ಹಾಗೂ ಸಂತೆ ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿಗಳು ವಾಹನ ದಟ್ಟಣೆಯಿಂದಾಗಿ ರಸ್ತೆ ದಾಟುವುದು ಕಷ್ಟವಾಗುತ್ತಿದೆ. ಪತ್ರಿಕೆಗಳಲ್ಲಿ ವರದಿಯಾದಾಗ ಶಾಲಾ ಸಮಯದಲ್ಲಿ ಸಂಚಾರಿ ಪೊಲೀಸ್ ಸಿಬ್ಬಂದಿ ನಿಯೋಜಿಸುವ ಇಲಾಖೆ ನಂತರದ ದಿನಗಳಲ್ಲಿ ತನ್ನ ಕಾರ್ಯ ಒತ್ತಡದ ನಡುವೆ ಈ ವಿಷಯವನ್ನು ಮರೆತುಬಿಡುತ್ತದೆ. ಇಲ್ಲಿ ಟ್ರಾಫಿಕ್ ಪೊಲೀಸ್ ಚೌಕಿ ನಿರ್ಮಿಸಿ ಒಬ್ಬ ಸಿಬ್ಬಂದಿ ನಿಯೋಜಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಜನರ ಒತ್ತಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net