ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಟೆಂಪೋ, ಮೂವರಿಗೆ ಗಾಯ

accident-15
Published on

ಬೆಂಗಳೂರು: ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕನ ಕ್ಯಾಬಿನ್ ತುಂಡಾಗಿ ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಚಾಲಕ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ನೈಸ್ ರಸ್ತೆಯ ರಾಮಸಂದ್ರ ಸೇತುವೆ ಬಳಿ ಶನಿವಾರ ಮಧ್ಯಾಹ್ನ ೧ ಗಂಟೆಗೆ ಈ ದುರ್ಘಟನೆ ನಡೆದಿದೆ. ಟೆಂಪೋ ಚಾಲಕ ರಾಘವೇಂದ್ರ, ಸಹಾಯಕರಾದ ಸಲೀಂ ಮತ್ತು ಫಯಾಜ್ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಾಲಕ ರಾಘವೇಂದ್ರ ಟೆಂಪೋದಲ್ಲಿ ಬೆಡ್‌ಶೀಟ್, ಕಾಟನ್ ತುಂಬಿಕೊಂಡು ಬ್ಯಾಡರಹಳ್ಳಿ ಕಡೆಯಿಂದ ಕೆಂಗೇರಿ ಕಡೆಗೆ ಬರುತ್ತಿದ್ದರು. ನೈಸ್ ರಸ್ತೆಯ ರಾಮಸಂದ್ರ ಸೇತುವೆ ಬಳಿ ವೇಗವಾಗಿ ಟೆಂಪೋ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ಟೆಂಪೋ ರಸ್ತೆಯ ಬಲಭಾಗದ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಚಾಲಕನ ಕ್ಯಾಬಿನ್ ತುಂಡಾಗಿ ಮೇಲ್ಸೇತುವೆಯಿಂದ ಕೆಳಗೆ ಬಿದ್ದಿದೆ. ಈ ವೇಳೆ ಚಾಲಕ ರಾಘವೇಂದ್ರ, ಆತನ ಸಹಾಯಕರಾದ ಸಲೀಂ ಮತ್ತು ಫಯಾಜ್ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಸ್ಥಳೀಯರು ಹಾಗೂ ಇತರೆ ವಾಹನಗಳ ಸವಾರರು ನೆರವಿಗೆ ಧಾವಿಸಿ ಮೂವರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ.

ಚಾಲಕನ ವಿರುದ್ಧ ದೂರು ದಾಖಲು:

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಚಾಲಕ ರಾಘವೇಂದ್ರ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಟೆಂಪೋ ಚಾಲನೆ ಮಾಡಿದ್ದೇ ಈ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಅಪಘಾತಕ್ಕೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಚಾಲಕ ರಾಘವೇಂದ್ರನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net