ರಸ್ತೆ ಕೆಲಸ ಪೂರ್ಣಗೊಳಿಸಲು ಗ್ರಾಮಸ್ಥರ ಒತ್ತಾಯ

ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಕೃಷ್ಣಮೂರ್ತಿ, ಹರೀಶ್, ದೇವರಾಜು, ಫಣೀಶ, ಶಿವ, ವೆಂಕಟೇಶ, ಸುರೇಶ್, ಕೃಷ್ಣಯ್ಯ, ಮಹೇಶ್ ಇದ್ದರು.
BTP29Photo1
Published on


ಬೆಟ್ಟದಪುರ: ಸಮೀಪದ ಚಪ್ಪರದಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಮುಖ್ಯರಸ್ತೆಯ ಕಾಂಕ್ರೀಟ್ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆ ಗ್ರಾಮದ ಕೆಲವು ಗ್ರಾಮಸ್ಥರು ಸೋಮವಾರ ಕಾಮಗಾರಿ ಬಳಿ ಸೇರಿ ರಸ್ತೆ ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.


ಮುಖ್ಯರಸ್ತೆಯ ಕಾಂಕ್ರೀಟ್ ಕಾಮಗಾರಿ ತುಂಬ ಮಂದಗತಿಯಲ್ಲಿ ನಡೆಯುತ್ತಿದೆ. ಅಲ್ಲದೆ ರಸ್ತೆ ಬದಿ ಮಣ್ಣು ಬಿಡದೆ ಇರುವುದರಿಂದ ವಾಹನ ಸವಾರರು ಓಡಾಡಲು ಸಮಸ್ಯೆಯಾಗಿದೆ. ಇನ್ನು ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಸರ್ಕಾರಿ ಸೇರಿದಂತೆ ಶಾಲೆ ಬಸ್‌ಗಳು ಗ್ರಾಮದ ಒಳಗೆ ಬಾರದಂತಾಗಿದೆ. ಇದರಿಂದ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಊರಿನ ಹೊರವಲಯದಿಂದ ಬಳಸಿ ಬರಬೇಕಾಗಿದೆ. ಇದು ವ್ಯವಸಾಯ ಸಂದರ್ಭವಾಗಿದ್ದು, ಮನೆಯಿಂದ ಟ್ರಾೃಕ್ಟರ್ ಹಾಗೂ ವಾಹನಗಳು ಓಡಾಡುವುದಕ್ಕೆ ಸಮಸ್ಯೆಯಾಗಿದೆ. ಹಾಗಾಗಿ ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ರಸ್ತೆ ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಿ ಜನಸಾಮಾನ್ಯರು ಹಾಗೂ ವಾಹನಗಳು ಓಡಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.


ಚಪ್ಪರದಹಳ್ಳಿ ಗ್ರಾಮದಲ್ಲಿ ಮುಖ್ಯರಸ್ತೆಯ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದೆ. ರಸ್ತೆ ಕೆಲಸ ಮಾಡುವ ಕೆಲಸಗಾರರ ಕಡೆಯವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕೆಲಸ ನಿಂತಿದೆ. ಹಬ್ಬ ಕಳೆದ ಬಳಿಕ ಕೆಲಸ ಮರು ಆರಂಭಗೊಳ್ಳಲಿದೆ. 250 ರಿಂದ 300 ಮೀ. ಉದ್ದದ ಕಾಮಗಾರಿ ಮಾತ್ರ ಬಾಕಿ ಇದ್ದು, ಮೂರು ದಿನದೊಳಗೆ ಕೆಲಸ ಪೂರ್ಣಗೊಳ್ಳಲಿದೆ. ಸಾರ್ವಜನಿಕರು ಸರ್ಕಾರಿ ಕೆಲಸ ನಡೆಯುವ ವೇಳೆ ಸಹಕಾರ ನೀಡಬೇಕು. ಕಾಂಕ್ರೀಟ್ ಹಾಕಿದ ತಕ್ಷಣ ಅದರ ಮೇಲೆ ವಾಹನ ಓಡಿಸಬಾರದು. ರಸ್ತೆ ಗಟ್ಟಿಯಾಗುವವರಿಗೆ ಕಾಯಬೇಕು. ಅದನ್ನು ಬಿಟ್ಟು ರಾತ್ರಿ ವೇಳೆ ವಾಹನ ಸಂಚಾರ ಮಾಡಬಾರದು. ರಸ್ತೆ ಹೆಚ್ವಿನ ದಿನ ಗುಣಮಟ್ಟವಾಗಿರಲು ಜನರ ಸಹಕಾರ ಮುಖ್ಯ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಜಯಂತ್ ವಿಜಯವಾಣಿಗೆ ತಿಳಿಸಿದ್ದಾರೆ.


ಗ್ರಾಮಸ್ಥರಾದ ಕೃಷ್ಣಮೂರ್ತಿ, ಹರೀಶ್, ದೇವರಾಜು, ಫಣೀಶ, ಶಿವ, ವೆಂಕಟೇಶ, ಸುರೇಶ್, ಕೃಷ್ಣಯ್ಯ, ಮಹೇಶ್ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net