ರಸ್ತಗೆ ವಾಹನ ಅಡ್ಡ ನಿಲ್ಲಿಸಿ ರೈತರ ಪ್ರತಿಭಟನೆ

Protest
Published on

ನಗರದ ಎಂ.ಜಿ.ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಸೋಮವಾರ ರೈತರು ವಾಹನಗಳನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿ ಪ್ರತಿಭಟನೆ ನಡೆಸಿದರು.

ಸ್ವಚ್ಛತೆ ಕಾರಣಕ್ಕೆ ಮಧ್ಯಾಹ್ನ 2 ಗಂಟೆಗೆ ನಂತರ ವ್ಯಾಪಾರ ಮಾಡುವಂತೆ ಮಾರುಕಟ್ಟೆಯ ವ್ಯಾಪಾರಸ್ಥರು ರೈತರ ತರಕಾರಿಯ ವಾಹನಗಳನ್ನು ಮಾರುಕಟ್ಟೆ ಆವರಣಕ್ಕೆ ಬಿಡಲು ವಿರೋಧಿಸಿದ್ದರು. ಈ ಸಂಬಂಧ ಘೋಷಣಾ ಫಲಕ ಹಾಕಿದರು. ಇದರಿಂದ ರೊಚ್ಚಿಗೆದ್ದ ರೈತರು ತರಕಾರಿಗಳನ್ನು ತುಂಬಿಕೊಂಡು ಬಂದಿದ್ದ ವಾಹನಗಳನ್ನು ಮಾರುಕಟ್ಟೆಯ ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ ಪ್ರತಿಭಟಿಸಿದರು. ಇದರಿಂದ ಸಂಚಾರ ವ್ಯತ್ಯಯವಾಯಿತು. ಈ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಭಟನಾನಿರತ ರೈತರ ಮನವೊಲಿಸಿ ತರಕಾರಿ ತುಂಬಿದ್ದ ವಾಹನಗಳನ್ನು ಮಾರುಕಟ್ಟೆ ಆವರಣಕ್ಕೆ ಕೊಂಡೊಯ್ಯುವಂತೆ ಮಾಡಿದರು.

ಇದೇ ವೇಳೆ ಮಾತನಾಡಿದ ಕೆಲ ರೈತರು, ಪ್ರತಿನಿತ್ಯ ನೂರಾರು ವಾಹನಗಳಲ್ಲಿ ರೈತರು ನೇರವಾಗಿ ಇಲ್ಲಿಗೆ ಬಂದು ವ್ಯಾಪಾರ ಮಾಡುತ್ತೇವೆ. ಯಾವುದೇ ಮಧ್ಯವರ್ತಿಗಳಿಗೆ ಒಂದು ರೂಪಾಯಿ ಕೊಡುವುದಿಲ್ಲ. ರೈತರು ಗ್ರಾಹಕರಿಗೆ ನೇರವಾಗಿ ವ್ಯಾಪಾರ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವವರು ನಮಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ಮಧ್ಯಾಹ್ನ 2 ಗಂಟೆ ಬಳಿಕ ಬಂದು ವ್ಯಾಪಾರ ಮಾಡಿ ಎಂದು ಹೇಳುತ್ತಿದ್ದಾರೆ. ನಾವು ದೂರದ ಊರುಗಳಿಂದ ಇಲ್ಲಿಗೆ ಬರುತ್ತೇವೆ. ತಡವಾಗಿ ಬಂದರೆ ತರಕಾರಿಗಳ ತಾಜಾತನ ಕಡಿಮೆಯಾಗುತ್ತದೆ. ಈ ಬಗ್ಗೆ ಮನವರಿಕೆ ಮಾಡಿದರೂ ಕೇಳುತ್ತಿಲ್ಲ. ನಮ್ಮ ವಾಹನಗಳನ್ನು ಮಾರುಕಟ್ಟೆ ಆವರಣದ ಒಳಕ್ಕೆ ಬಿಡದೇ ವಿರೋಧಿಸುತ್ತಿದ್ದಾರೆ. ನಾವು ವ್ಯಾಪಾರ ಮಾಡುತ್ತೇವೆ, ಅವರೂ ವ್ಯಾಪಾರ ಮಾಡುತ್ತಾರೆ. ಜಿಲ್ಲಾಡಳಿತ ನಮಗೂ ಇಲ್ಲಿ ವ್ಯಾಪಾರ ಮಾಡುವುದಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಇದನ್ನು ಒಪ್ಪದ ವ್ಯಾಪಾರಸ್ಥರು ತರಕಾರಿಗಳನ್ನು ತರುವ ರೈತರು ದಿನದ 24 ಗಂಟೆಯೂ ಇಲ್ಲೇ ಇರುತ್ತಾರೆ. ಪರಿಣಾಮ ಸ್ವಚ್ಛತಾ ಕಾರ್ಯಕ್ಕೆ ತೊಂದರೆಯಾಗುತ್ತಿದೆ. ಇದರಿಂದ ರೋಗರುಜಿನಗಳು ಹರಡುವ ಭೀತಿಯಿದೆ. ಹಾಗಾಗಿ ರೈತರು ಮಧ್ಯಾಹ್ನ 2 ಗಂಟೆ ಬಳಿಕ ಬಂದರೆ ಸ್ವಚ್ಛತಾ ಕಾರ್ಯಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net