

ನಗರದ ಅರವಿಂದನಗರದಲ್ಲಿ (ನಂ ಸಿಎ-4) ನೂತನವಾಗಿ ನಿರ್ಮಿಸಿರುವ ರವಿತೇಜ ಕನ್ವೆನ್ಷನ್ ಹಾಲ್ ಅನ್ನು ಸೋಮವಾರ ಸುತ್ತೂರು ವೀರಸಿಂಹಾಸನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ದೇವನೂರು ಶ್ರೀ ಗುರು ಮಲ್ಲೇಶ್ವರ ಮಹಾ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಉದ್ಘಾಟಿಸಲಾಯಿತು.
ಶಿವ ದೇವಾಲಯ ಸಮೀಪದಿಂದ ವಿವಿಧ ಮಠಗಳ ಮಠಾಧೀಶರು, ಗಣ್ಯರನ್ನು ಪೂರ್ಣಕುಂಭ, ಮಂಗಳವಾದ್ಯಗಳೊಂದಿಗೆ ಸಮುದಾಯ ಭವನಕ್ಕೆ ಕರೆತರಲಾಯಿತು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಮಠಗಳ ಮಠಾಧಿಪತಿಗಳು ಸಮುದಾಯ ಭವನವನ್ನು ಉದ್ಘಾಟಿಸಿದರು. ಶ್ರೀಗಳ ಪಾದಪೂಜೆ ಬಳಿಕ ವೇದಿಕೆ ಕಾರ್ಯಕ್ರಮ ನಡೆಯಿತು.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಸದಾ ಕಾಲ ಸಮುದಾಯ ಭವನದಲ್ಲಿ ಮಂಗಳ ಕಾರ್ಯಗಳು ನಿರಂತರವಾಗಿ ಜರುಗಲಿ. ಇಲ್ಲಿ ನಡೆಯುವ ಶುಭ ಕಾರ್ಯಗಳು ಎಲ್ಲರ ಜೀವನದಲ್ಲೂ ಒಳಿತು ಮಾಡಲಿ. ಸಮುದಾಯ ಭವನದ ಮಾಲೀಕರಾದ ಎನ್.ರವೀಶ್ ಅವರ ಆಶಯದಂತೆ ಒಳಿತಾಗಲಿ ಎಂದು ಹಾರೈಸಿದರು.
ಶಾಸಕರಾದ ಟಿ.ಎಸ್.ಶ್ರೀವತ್ಸ, ಜಿ.ಟಿ.ದೇವೇಗೌಡ, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ ಪ್ರಸಾದ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಗಾವಡಗೆರೆ ಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ, ಕುದೇರು ಮಠದ ಶ್ರೀ ಗುರುಶಾಂತ ಸ್ವಾಮೀಜಿ, ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಮಾದಹಳ್ಳಿ ಉಕ್ಕಿನ ಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ, ಚಿಲಕವಾಡಿ ಪಟ್ಟದ ಮಠದ ಶ್ರೀ ಇಮ್ಮಡಿ ಗುರುಲಿಂಗ ಸ್ವಾಮೀಜಿ, ದಂಡಿಕೆರೆ ಶ್ರೀ ಮಹಾಂತಸ್ವಾಮಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ, ವಿವಿಧ ಮಠಗಳ ಮಠಾಧೀಶರು, ರವಿತೇಜ ಕನ್ವೆನ್ಷನ್ ಹಾಲ್ ಮಾಲೀಕ ಎನ್.ರವೀಶ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಮೈಸೂರು ಬಸವ ಬಳಗಗಳ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಎಂ.ಪ್ರದೀಪ್ ಕುಮಾರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಜಿ ಅಧ್ಯಕ್ಷ ಕಾನ್ಯ ಶಿವಮೂರ್ತಿ, ಸೇಫ್ ವ್ಹೀಲ್ ಮಾಲೀಕ ಬಿ.ಎಸ್.ಪ್ರಶಾಂತ್, ಉದ್ಯಮಿ ಯು.ಎಸ್.ಶೇಖರ್, ಎಚ್.ಎಸ್.ವೀರೇಶ್, ಎಂ.ಬೇಬಿ, ರೂಪಾ ಪರಶಿವಮೂರ್ತಿ ಪಾಲ್ಗೊಂಡಿದ್ದರು.
ಬಿವೈವಿ ಭೇಟಿ: ಭಾನುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಸಭಾಂಗಣಕ್ಕೆ ಚಾಲನೆ ನೀಡಿದ್ದರು. ಮಾಲೀಕರಾದ ಎನ್.ರವೀಶ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಶಾಸಕ ಟಿ.ಎಸ್.ಶ್ರೀವತ್ಸ ಇತರರಿದ್ದರು.
ಭವನದ ವಿಶೇಷತೆ
ಭವನವು 1 ಸಾವಿರ ಆಸನಗಳುಳ್ಳ ಹವಾನಿಯಂತ್ರಿತ ಸಂಭಾಂಗಣವನ್ನು ಹೊಂದಿದೆ. 500 ಆಸನಗಳುಳ್ಳ ಊಟದ ಸಭಾಂಗಣ, 3 ಸಾವಿರ ಜನರಿಗೆ ಒಮ್ಮೆಲೆ ಊಟ ತಯಾರಿಸಲು ಅಗತ್ಯವಾದ ಅಡುಗೆ ಮನೆ, ಬಫೇಟ್ ಏರಿಯಾ, 1 ವಿಶಾಲವಾದ ಡಾರ್ಮಿಟಿ ಸೌಲಭ್ಯ ಹೊಂದಿದೆ.