ರಮೇಶ್ ಜಾರಕಿಹೊಳಿ ವಿರುದ್ಧದ ಲೈಂಗಿಕ ಹಗರಣ ಎಡಿಟ್ ವಿಡಿಯೋ, ಹನಿಟ್ರ್ಯಾಪ್ ದಂಧೆ, ಕಲ್ಲಹಳ್ಳಿ ವಿರುದ್ಧ ಆರೋಪ

prashanth kumar
Published on

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೇಲೆ ಲೈಂಗಿಕ ಹಗರಣದ ಆರೋಪದ ಮೇಲೆ ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ, ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕಬ್ಬನ್ ಪಾರ್ಕ್ ಠಾಣೆಗೆ ದಿನೇಶ್ ಕಲ್ಲಹಳ್ಳಿ ವಿರುದ್ಧ ಗುರುವಾರ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಕುಮಾರ್ ದೂರು ನೀಡಿದ್ದಾರೆ.

ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ಅಶ್ಲೀಲ ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಅಥವಾ ಹನಿಟ್ರ್ಯಾಪ್ ಮಾಡಲಾಗಿದೆ. ಅಲ್ಲದೆ, ಇನ್ನೂ ಮೂವರು ಪ್ರಭಾವಿ ರಾಜಕಾರಣಿಗಳ ಲೈಂಗಿಕ ಹಗರಣಗಳ ಸಿಡಿ ಇರುವುದಾಗಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಪ್ರಭಾವಿ ವ್ಯಕ್ತಿಗಳಿಗೆ ಬ್ಲ್ಯಾಕ್ ಮೇಲ್ ಮಾಡುವ ಕುತಂತ್ರವಾಗಿದೆ. ಅನ್ಯಾಯಕ್ಕೆ ಒಳಗಾಗಿದ್ದರೇ ಸಂತ್ರಸ್ತೆಯೇ ಬಂದು ದೂರು ನೀಡಬೇಕಾಗಿತ್ತು. ಆದರೆ, ಇಲ್ಲಿಯವರೆಗೂ ಹೇಳಿಕೆ ನೀಡಿಲ್ಲ. ಇದೊಂದು ಎಡಿಟ್ ಮಾಡಿರುವ ಅಥವಾ ಹನಿಟ್ರ್ಯಾಪ್ ವಿಡಿಯೋ ಆಗಿದ್ದು, ಬಹಿರಂಗ ಮಾಡಿರುವ ದಿನೇಶ್ ಕಲ್ಲಹಳ್ಳಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇದರ ಹಿಂದೆ ಇರುವ ತಪ್ಪಿತಸ್ಥರನ್ನು ಪತ್ತೆ ಮಾಡಿ ಸೂಕ್ತ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಪ್ರಶಾಂತ್ ಕುಮಾರ್ ಒತ್ತಾಯ ಮಾಡಿದ್ದಾರೆ.

ಮಾ.3ರಂದು ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ಪುಟ್ಟೇಗೌಡ ಎಂಬಾತ ದಿನೇಶ್ ಕಲ್ಲಹಳ್ಳಿ ವಿರುದ್ಧ ದೂರು ನೀಡಿದ್ದರು. ಇದೀಗ ಇದು 2ನೇ ದೂರು ಆಗಿದೆ. ಪೊಲೀಸರು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net