ರಫ್ತು ಬೆಳವಣಿಗೆಗೆ ಪೂರಕ ಕೈಗಾರಿಕಾ ನೀತಿ: ಸಿಎಂ

Published on

ಬೆಂಗಳೂರು: ರಫ್ತು ಬೆಳವಣಿಗೆಗೆ ಪೂರಕ ಕೈಗಾರಿಕಾ ನೀತಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ರಫ್ತಿನಲ್ಲಿ ಮಹಾರಾಷ್ಟ್ರ ಮತ್ತು ತಮಿಳುನಾಡು 1 ಮತ್ತು 2 ನೇ ಸ್ಥಾನದಲ್ಲಿವೆ. ಕರ್ನಾಟಕ ನಂಬರ್ ಒನ್ ಸ್ಥಾನಕ್ಕೆ ಏರಬೇಕು. ಅದಕ್ಕೆ ಪೂರಕವಾಗಿ ಸರ್ಕಾರ ಸ್ಪಂದಿಸಲಿದೆ. ಉದ್ಯಮಿಗಳ ಬೇಡಿಕೆಗೆ ಅನುಗುಣವಾಗಿ ಉದ್ಯೋಗಿಗಳನ್ನು ಸೃಷ್ಟಿ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತದೆ. ಕೌಶಲ್ಯಾಭಿವೃದ್ಧಿ ಇಲಾಖೆಗೆ ಶಕ್ತಿ ತುಂಬುತ್ತೇವೆ. ಇದರಿಂದ ಕೈಗಾರಿಕಾ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಬೇಡಿಕೆ ಇರುವ ಉದ್ಯೋಗಿಗಳ ತಯಾರು

ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆ ಆಗಬೇಕು ಎನ್ನುವ ಆಶಯವನ್ನು ಹೊಂದಿದ್ದು, ಸರ್ಕಾರ ಎಲ್ಲ ರೀತಿಯ ಬೆಂಬಲವನ್ನು ಉದ್ಯಮಿಗಳಿಗೆ ನೀಡಲಿದೆ ಎಂದು ಭರವಸೆ ನೀಡಿದರು. ಮಾರುಕಟ್ಟೆ ಯಲ್ಲಿ ಬೇಡಿಕೆಯಲ್ಲಿರುವ ಉದ್ಯೋಗಿಗಳನ್ನು ತಯಾರು ಮಾಡಲಾಗುವುದು. ಕೈಗಾರಿಕೆ ಬೆಳೆದರೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿ ದೇಶದ ಆರ್ಥಿಕತೆ ಬೆಳೆಯಲು ನೆರವಾಗಲಿದೆ. ಜಿಡಿಪಿ ಬೆಳೆದು ರಾಜ್ಯ ಬೆಳೆಯಲು ಸಾಧ್ಯವಾಗಿ ರಾಷ್ಟ್ರದ ಜಿಡಿಪಿಗೆ ದೊಡ್ಡ ಕೊಡುಗೆಯನ್ನು ರಾಜ್ಯದಿಂದ ಕೇಂದ್ರಕ್ಕೆ ಕೊಡಲು ಸಾಧ್ಯವಾಗುತ್ತದೆ. ಇವೆಲ್ಲ ಒಂದಕ್ಕೊಂದು ಸಂಬಂಧ ಹೊಂದಿದೆ. ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದರೆ ಹೂಡಿಕೆಗಳು ಬರುತ್ತವೆ. ಹೂಡಿಕೆಗಳು ಬಂದಲ್ಲಿ ಕೈಗಾರಿಕೆಗಳು ಬಂದು ನಿರುದ್ಯೋಗ ನಿವಾರಣೆಯಾಗುತ್ತದೆ. ಕರ್ನಾಟಕದಲ್ಲಿ ಉತ್ತಮ ಕಾನೂನು ಸುವ್ಯವಸ್ಥೆ ಕಲ್ಪಿಸಲಾಗುವುದು. ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ಉದ್ಯೋಗಿಗಳನ್ನು ಸೃಷ್ಟಿ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತದೆ ಎಂದು ತಿಳಿಸಿದರು.

ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕ್ರಮ

ಕೌಶಲ್ಯ ಇಲಾಖೆಯಿಂದ ಕೈಗಾರಿಕೆಗಳಿಗೆ ಅಗತ್ಯವಿರುವ ಉದ್ಯೋಗಿಗಳನ್ನು ತಯಾರು ಮಾಡುವ ಸಲುವಾಗಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಮಾರುಕಟ್ಟೆಗೆ ಸೂಕ್ತವಾಗಿರುವ ಉದ್ಯೋಗಿಗಳನ್ನು ತಯಾರು ಮಾಡಿದರೆ ನಿರುದ್ಯೋಗ ಸಮಸ್ಯೆ ಬಗೆಹರಿಯಲಿದೆ ಎಂದರು.

ರಾಜ್ಯದಲ್ಲಿ ಉದ್ದಿಮೆಗಳ ಪ್ರಾರಂಭಕ್ಕೆ ಹಾಗೂ ಕೈಗಾರಿಕೆಗಳಿಗೆ ಪ್ರೋತ್ಸಾಹದಾಯಕ ವಾತಾವರಣವಿದೆ. ಶ್ರೇಷ್ಠ ರಫ್ತು ಪ್ರಶಸ್ತಿ ಪಡೆದವರು ಇತರ ಉದ್ದಿಮೆದಾರರಿಗೆ ಮಾದರಿ ಹಾಗೂ ಸ್ಪೂರ್ತಿಯಾಗಿದ್ದಾರೆ. ಎಂದು ತಿಳಿಸಿದರು.

ಕಾಮನ್ ಫೆಸಿಲಿಟೀಸ್ ಸೆಂಟರ್

ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆ ಚುರುಕಾಗಿ ನಡೆಯಬೇಕಿದ್ದು, ನಾವು ದಾಪುಗಾಲಿಡಲು ನಿರ್ಧರಿಸಿದ್ದೇವೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದ್ಯದಲ್ಲೇ ಉದ್ಯಮಿಗಳೊಂದಿಗೆ ಚರ್ಚಿಸಲು ಒಪ್ಪಿಕೊಂಡಿದ್ದಾರೆ ಎಂದರು.

ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಬಲ ತುಂಬಲು ‘ಕಾಮನ್ ಫೆಸಿಲಿಟೀಸ್ ಸೆಂಟರ್’ಗಳನ್ನು ಸ್ಥಾಪಿಸಿ, ಒದಗಿಸಲು ಈಗಾಗಲೇ ಟಾಟಾ ಕನ್ಸಲ್ಟೆನ್ಸಿ ಜತೆ ವಿಚಾರ ವಿನಿಮಯ ನಡೆಸಲಾಗಿದೆ. ಇದರಲ್ಲಿ ಆ ಸಂಸ್ಥೆ ಶೇಕಡ 70 ಮತ್ತು ರಾಜ್ಯ ಸರಕಾರ ಶೇಕಡ 30ರಷ್ಟು ಬಂಡವಾಳ ಹೂಡಲಿವೆ ಎಂದು ತಿಳಿಸಿದರು.

2-3ನೇ ಹಂತದ ನಗರಗಳಿಗೆ ಹೋಗಿ:

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಬೆಂಗಳೂರಿನ ಜನಸಂಖ್ಯೆ 1.30 ಕೋಟಿ ದಾಟಿದ್ದು, ಒತ್ತಡ ಅನುಭವಿಸುತ್ತಿದೆ. ಜತೆಗೆ ಎಲ್ಲ ಉದ್ದಿಮೆಗಳೂ ರಾಜಧಾನಿಯಲ್ಲೇ ಕೇಂದ್ರೀಕೃತಗೊಂಡಿವೆ. ಆದ್ದರಿಂದ ಉದ್ಯಮಿಗಳು ಇನ್ನುಮುಂದೆ 2 ಮತ್ತು 3ನೇ ಹಂತದ ನಗರಗಳತ್ತ ಗಮನ ಹರಿಸಬೇಕು. ಇಂಥವರಿಗೆ ಸರ್ಕಾರ ವಿಶೇಷ ಪ್ರೋತ್ಸಾಹ, ಸವಲತ್ತುಗಳನ್ನು ಕೊಡಲಿದೆ. ಈ ಮೂಲಕ ಗ್ರಾಮಾಂತರ ಪ್ರದೇಶದ ಯುವಜನರ ಪ್ರತಿಭೆಗೂ ಮನ್ನಣೆ ಕೊಡಬೇಕು ಎಂದು ಸಲಹೆ ನೀಡಿದರು.

ಶಾಸಕ ರಿಜ್ವಾನ್ ಅರ್ಷದ್, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.

68 ಉದ್ಯಮಿಗಳಿಗೆ ಪ್ರಶಸ್ತಿ ಪ್ರದಾನ

12 ವಿಭಾಗಗಳ ಅಡಿಯಲ್ಲಿ ಒಟ್ಟು 68 ಉದ್ಯಮಿಗಳಿಗೆ 2017-18, 2018-19 ಮತ್ತು 2019-20ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಯೋಕಾನ್, ಟೊಯೋಟಾ ಕಿರ್ಲೋಸ್ಕರ್, ಎಚ್‌ಎಎಲ್, ಮೈಸೂರು ಪೇಂಟ್ಸ್ ವಾರ್ನಿಶ್, ಜಿ.ಇ.ಇಂಡಿಯಾ ಪ್ರೈವೇಟ್ ಲಿಮಿಟೆಡ್, ಗೋಕಲ್‌ದಾಸ್ ಎಕ್ಸ್‌ಪೋರ್ಟ್ಸ್ ಮುಂತಾದ ಕಂಪನಿಗಳ ಪ್ರತಿನಿಧಿಗಳು ಪುರಸ್ಕಾರ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net