

ಬಾಗಲಕೋಟೆ: ರನ್ನನ ನಾಡು ಮುಧೋಳದಲ್ಲಿ ಭಂಡಾರ ಜಾತ್ರೆ ಐದು ದಿನಗಳ ವೈಭವದಿಂದ ಜರುಗಿತು. ಮಂಗಳವಾರ ಗ್ರಾಮ ದೇವತೆಗಳಿಗೆ ಊಡಿ ತುಂಬುವ ಮೂಲಕ ಜಾತ್ರೆಗೆ ಮಂಗಳ ಹಾಡಲಾಯಿತು.
ಮುಧೋಳ ನಗರದ ಗ್ರಾಮ ದೇವತೆಗಳಾದ ದ್ಯಾಮವ್ವ, ದುರ್ಗವ್ವ ದೇವಿ ಜಾತ್ರೆ ಅಂಗವಾಗಿ ಶುಕ್ರವಾರ ಭಂಡಾರ ಜಾತ್ರೆಗೆ ಚಾಲನೆ ನೀಡಲಾಗಿತ್ತು. ಐದು ದಿನಗಳ ಕಾಲ ವಿವಿಧ ವಿಶೇಷ ಕಾರ್ಯಕ್ರಮಗಳು ಗಮನ ಸೆಳೆದವು. ಪ್ರತಿ ಐದು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಕೋವಿಡ್ ಹಿನ್ನಲೆಯಲ್ಲಿ ಏಳು ವರ್ಷಗಳಿಂದ ಜಾತ್ರೆ ನಡೆದಿರಲಿಲ್ಲ. ಪ್ರಸಕ್ತ ವರ್ಷ ಜಾತ್ರ ವೈಭವ ಕಳೆಗಟ್ಟಿತ್ತು.
ಈ ಜಾತ್ರೆಯಲ್ಲಿ ಭಂಡಾರ ಎರಚುವುದೇ ವಿಶೇಷ. ದೇವಿ ಮೂರ್ತಿಗಳನ್ನು ಮೆರವಣಿಗೆ ಮೂಲಕ ನಗರದ ವಿವಿಧೆಡೆ ಸಂಚರಿಸಿ ಟನ್‌ಗಟ್ಟಲೆ ಭಂಡಾರ ಎರಚಿ ಭಕ್ತರು ಸಂತಸಪಟ್ಟರು. ಈ ಹಿನ್ನಲೆಯಲ್ಲಿ ರನ್ನ ನಗರಿಯ ರಸ್ತೆಗಳೆಲ್ಲ ಭಂಡಾರಮಯವಾಗಿದ್ದವು. ಜಾತ್ರ ವೈಭವ ಎಲ್ಲೆಡೆ ಮನೆ ಮಾಡಿತ್ತು. ಉತ್ತಮ ಮಳೆ-ಬೆಳೆಗಾಗಿ ಭಕ್ತರು ಪ್ರಾರ್ಥಿಸಿದರು.