ರೈತರೇ, ಬಹುಬೆಳೆ ಕೃಷಿಗೆ ಆದ್ಯತೆ ನೀಡಿ:ಡಾ. ಜಗದೀಶ್

kvk
ಕೆವಿಕೆಯಲ್ಲಿ ಏರ್ಪಡಿಸಿದ್ದ ಆಹಾರ ದಿನಾಚರಣೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಡಾ. ಆರ್.ಸಿ.ಜಗದೀಶ ಸಹ್ಯಾದ್ರಿ ಎರೆಹುಳು ಗೊಬ್ಬರ ವಿತರಿಸಿದರು. ಡಾ. ಕೆ.ಟಿ.ಗುರುಮೂರ್ತಿ, ಡಾ. ಬಿ.ಸಿ.ಹನುಮಂತಸ್ವಾಮಿ, ಡಾ. ಸುನೀಲ್, ಡಾ. ಎಸ್.ಪ್ರದೀಪ್, ಮಂಜುಳಾ ಇತರರಿದ್ದರು.
Published on

ಶಿವಮೊಗ್ಗ: ಗಾಳಿ, ನೀರು ಮತ್ತು ಆಹಾರ ಮನುಷ್ಯನ ಮೂಲಭೂತ ಅಗತ್ಯ. ಪ್ರತಿಯೊಬ್ಬರೂ ಅವರ ದೈನಂದಿನ ಚಟುವಟಿಕೆಗೆ ಅಗತ್ಯವಿರುವುಷ್ಟು, ಅವರ ವಯೋಮಾನಕ್ಕೆ ಅನುಗುಣವಾಗಿ ಆಹಾರ ಸೇವಿಸಿವುದು ಹಕ್ಕು ಎಂದು ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ಹೇಳಿದರು.

ವಿಶ್ವ ಆಹಾರ ದಿನದ ಅಂಗವಾಗಿ ನವುಲೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಜೀವನ, ಭವಿಷ್ಯಕ್ಕಾಗಿ ಆಹಾರ ಪ್ರತಿಯೊಬ್ಬರ ಹಕ್ಕು. ಜನಸಾಮಾನ್ಯರಿಗೆ ಸಿಗುವ ಆಹಾರಗಳು ವೈವಿಧ್ಯವಾಗಿರಬೇಕು. ಪೋಷಕಾಂಶದಿಂದ ಕೂಡಿರಬೇಕು. ಎಲ್ಲ ವರ್ಗದವರ ಕೈಗೆಟುಕುವಂತಿರಬೇಕು ಎಂದು ಅಭಿಪ್ರಾಯಪಟ್ಟರು.
ವಿವಿಯಿಂದ ಸಮಗ್ರ ಕೃಷಿ ಪದ್ಧತಿಗಳು, ದ್ವಿದಳ ಧಾನ್ಯಗಳು, ಸಿರಿಧಾನ್ಯಗಳು, ಹಣ್ಣು, ತರಕಾರಿಗಳನ್ನು ಬೆಳೆಯಲು ರೈತರಿಗೆ ತಾಂತ್ರಿಕ ಮಾಹಿತಿ ನೀಡಲಾಗುತ್ತಿದೆ. ಆ ಮೂಲಕ ಪೌಷ್ಟಿಕ ಆಹಾರ ಉತ್ಪಾದನೆ ಹಾಗೂ ಲಭ್ಯತೆಯನ್ನು ಸರಿದೂಗಿಸಲಾಗುತ್ತಿದೆ. ಹಸಿವು ಮುಕ್ತ ಭಾರತದ ಆಶಯದೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳು ಕಲ್ಯಾಣ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಡಾ. ಸಂತೋಷ್‌ಕುಮಾರ್ ಮಾತನಾಡಿ, 1979ರಲ್ಲಿ ಆಹಾರ ದಿನಾಚರಣೆ ಘೋಷಣೆಯಾಯಿತು. ಹಸಿವಿನಿಂದ ಬಳಲುತ್ತಿರುವವರಿಗೆ ಪೌಷ್ಟಿಕ ಆಹಾರಗಳ ಬಗ್ಗೆ ಜಾಗೃತಿ ಮೂಡಿಸುವುದು, ಆರೋಗ್ಯಕರ ಆಹಾರವನ್ನು ಉತ್ತೇಜಿಸುವುದು ಈ ದಿನದ ಮಹತ್ವ ಎಂದು ಹೇಳಿದರು.
ಸಹ್ಯಾದ್ರಿ ಎರೆಹುಳು ಗೊಬ್ಬರವನ್ನು ಬಿಡುಗಡೆ ಮಾಡಲಾಯಿತು. ಅಂಗನವಾಡಿ ಕಾರ್ಯಕರ್ತೆಯರಿಗೆ ಚಕ್ರಮುನಿ ಹಾಗೂ ಅಂಗಾಂಶ ಬಾಳೆ ಸಸಿಗಳನ್ನು ವಿತರಿಸಲಾಯಿತು. ವಿವಿಯ ವಿಸ್ತರಣಾ ನಿರ್ದೇಶಕ ಡಾ. ಕೆ.ಟಿ.ಗುರುಮೂರ್ತಿ, ಹಿರಿಯ ವಿಜ್ಞಾನಿ ಡಾ. ಸುನೀಲ್, ಸಹ ಸಂಶೋಧನಾ ನಿರ್ದೇಶಕರಾದ ಡಾ. ಎಸ್.ಪ್ರದೀಪ್, ಡಾ. ಬಿ.ಸಿ.ಹನುಮಂತಸ್ವಾಮಿ, ಕೃಷಿ ಇಲಾಖೆ ಉಪನಿರ್ದೇಶಕಿ ಮಂಜುಳಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net