

ಸರಗೂರು: ರಕ್ತದಾನ ಒಬ್ಬರ ಜೀವವನ್ನು ಉಳಿಸುತ್ತದೆ. ಅದಕ್ಕೆ ಯಾವುದೇ ಪರ್ಯಾಯವಿಲ್ಲ. ಕೇವಲ ಒಂದು ದಾನವು ನಾಲ್ವರ ಜೀವವನ್ನು ಉಳಿಸುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ತಿಳಿಸಿದರು.
ಪಟ್ಟಣದ ಲಯನ್ಸ್ ಕ್ಲಬ್ ಸರಗೂರು ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಕಚೇರಿ ವತಿಯಿಂದ ಸೋಮವಾರ ಲಯನ್ಸ್ ಶಾಲೆಯಲ್ಲಿ ಮಕ್ಕಳಿಗೆ ಆಯೋಜಿಸಿದ್ದ ಉಚಿತವಾಗಿ ರಕ್ತ ಗುಂಪು ಪರೀಕ್ಷೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಕ್ತದಾನ ಮಾಡುವ ಮೂಲಕ ನಿಮ್ಮ ಆರೋಗ್ಯದ ಜಾಡು ಹಿಡಿಯಬಹುದು ಮತ್ತು ಆಹಾರ, ವ್ಯಾಯಾಮ, ಜೀವನಶೈಲಿ ಬದಲಾವಣೆ ಮತ್ತಿತರ ಅಂಶಗಳು ಹೇಗೆ ದೇಹದ ಮೇಲೆ ಪರಿಣಾಮ ಬೀರುತ್ತದೆಂದು ತಿಳಿಯಬಹುದು ಎಂದರು.
ಮನುಷ್ಯನ ರಕ್ತವನ್ನು ಎ, ಬಿ, ಎಬಿ, ಮತ್ತು ಒ ಎಂಬ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಹೆಚ್ಚಿನ ಜನರಲ್ಲಿ ಸಾಮಾನ್ಯವಾಗಿ ಎ ಪಾಸಿಟಿವ್ ಮತ್ತು ಒ ಪಾಸಿಟಿವ್ ಗುಂಪುಗಳು ಕಾಣಸಿಗುತ್ತವೆ. ಬಿ ನೆಗೆಟಿವ್, ಒ ನೆಗೆಟಿವ್ ಮುಂತಾದ ರಕ್ತದ ಗುಂಪುಗಳು ಬಹಳ ವಿರಳ. ಇಂತಹ ವ್ಯಕ್ತಿಗಳಿಗೆ ರಕ್ತವನ್ನು ಸಂಗ್ರಹಿಸಿ ನೀಡುವುದು ಬಹಳ ಕಷ್ಟದ ಕೆಲಸ. ಆ ಕಾರಣಕ್ಕಾಗಿಯೂ ವಿರಳ ರಕ್ತದ ಗುಂಪನ್ನು ಹೊಂದಿದ ವ್ಯಕ್ತಿಗಳನ್ನು ಗುರುತಿಸಿ ಅವರ ದೂರವಾಣಿ ಸಂಖ್ಯೆ ತೆಗೆದುಕೊಳ್ಳಲಾಗುತ್ತದೆ ಹಾಗೂ ಅಗತ್ಯವಿದ್ದಾಗ ಮಾತ್ರ ಇಂತಹ ವಿರಳ ಗುಂಪಿನ ವ್ಯಕ್ತಿಗಳಿಂದ ರಕ್ತದಾನವನ್ನು ಪಡೆಯಲಾಗುತ್ತದೆ ಎಂದರು.
500ಕ್ಕೂ ಹೆಚ್ಚು ಮಕ್ಕಳಿಗೆ ರಕ್ತ ಗುಂಪು ಪರೀಕ್ಷೆ ಮಾಡಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀಕಂಠಸ್ವಾಮಿ, ಬ್ರಹ್ಮದೇವಯ್ಯ, ಪ್ರತಾಪ್, ಪಪಂ ಸದಸ್ಯ ಶ್ರೀನಿವಾಸ್, ನಾಗರಾಜು, ಪ್ರಾಂಶುಪಾಲರಾದ , ದಾಸಚಾರಿ, ಮುಖ್ಯ ಶಿಕ್ಷಕಿ ಪದ್ಮಶ್ರೀ, ಆರೋಗ್ಯ ಸಿಬ್ಬಂದಿ ವರ್ಗದವರಾದ ರವಿರಾಜ್, ನಾಗರಾಜು, ಪ್ರಿಯಾಂಕಾ, ಪವಿತ್ರಾ ಮತ್ತು ಶಾಲೆ ಶಿಕ್ಷಕರು ಹಾಜರಿದ್ದರು.