ರಕ್ತದಾನದಿಂದ ಅಡ್ಡ ಪರಿಣಾಮವಿಲ್ಲ : ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ.ಪ್ರಜ್ವಲ್ ಕುಮಾರ್ ಅಭಿಮತ

images
Published on


ಮೈಸೂರು : ರಕ್ತದಾನ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಬದಲಿಗೆ ಆರೋಗ್ಯವಂತರಾಗಿ ಇರಲು ಸಹಕಾರಿಯಾಗಲಿದೆ ಎಂದು ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ.ಪ್ರಜ್ವಲ್ ಕುಮಾರ್ ಅಭಿಪ್ರಾಯಪಟ್ಟರು.

ಎಚ್.ಡಿ.ಕೋಟೆ ಪಟ್ಟಣದ ಜೈನ ಭವನದಲ್ಲಿ ಶನಿವಾರ ಅಖಿಲ ಭಾರತೀಯ ತೇರಾಪಂತ್ ಯವಕ ಪರಿಷತ್, ರಾಜಸ್ಥಾನ ಸಮಾಜ ಹಾಗೂ ರೋಟರಿ ವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ರಕ್ತದಾನ ಮಾಡಿದರೆ ರೋಗ ಬರುತ್ತದೆ ಎಂಬುದು ಸುಳ್ಳು. ಎಲ್ಲ ಆರೋಗ್ಯವಂತರು ರಕ್ತದಾನ ಮಾಡಬಹುದು. ತುರ್ತು ಸಂದರ್ಭದಲ್ಲಿ ರಕ್ತದಾನ ಬಹಳ ಪ್ರಾಮುಖ್ಯತೆ ಹೊಂದಿರುತ್ತದೆ. ಒಬ್ಬರು ರಕ್ತದಾನ ಮಾಡುವುದರಿಂದ ನಾಲ್ಕು ಜೀವಗಳನ್ನು ಉಳಿಸಬಹುದು ಎಂದು ತಿಳಿಸಿದರು.


ರಕ್ತದಾನ ಮಾಡುವುದರಿಂದ ಹೃದಯಾಘಾತ ಹಾಗೂ ರಕ್ತದೊತ್ತಡ, ಚರ್ಮರೋಗ ತಡೆಯಬಹುದು. ಜತೆಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. 18 ವರ್ಷ ಮೇಲ್ಪಟ್ಟ ಹಾಗೂ 60 ವರ್ಷ ಒಳಪಟ್ಟ ಆರೋಗ್ಯವಂತರೆಲ್ಲರೂ ರಕ್ತದಾನ ಮಾಡಬಹುದು. ಎಚ್‌ಐವಿ ಸೋಂಕಿತರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು, ಬಾಣಂತಿಯರು, ಮಗುವಿಗೆ ಹಾಲು ಉಣಿಸುವವರು ಹಾಗೂ ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿರುವವರು ರಕ್ತದಾನ ಮಾಡಬಾರದು ಎಂದರು.


ಇದೇ ಸಂದರ್ಭದಲ್ಲಿ 52 ಜನರು ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಬ್ಲಡ್ ಬ್ಯಾಂಕ್‌ನ ರಶ್ಮಿ, ರಾಜಸ್ಥಾನ ಸಮಾಜದ ಅಧ್ಯಕ್ಷ ಸಮರತ್ ಲಾಲ್ ಕೊಠಾರಿ, ನಾರಾಯಣ್ ಲಾಲ್, ರೋಟರಿ ಕ್ಲಬ್ ಅಧ್ಯಕ್ಷ ಗಣೇಶ್ ಲಾಡ್, ರತನ್ ಲಾಲ್, ನೇಮಿಚಂದ, ಸಂತೋಷ್, ರಾಕೇಶ್ ಶರ್ಮ, ರವಿ ಕನ್ಯಲಾಲ್, ಬೆರುಲಾಲ್, ಪ್ಯಾರಲಾಲ್, ಸಿದ್ದರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net