

ಬಾಳೆಹೊನ್ನೂರು: ರಂಭಾಪುರಿ ಪೀಠಕ್ಕೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಶನಿವಾರ ಭೇಟಿ ನೀಡಿ ಪೀಠ ದರ್ಶನ ಮಾಡಿ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು.
ಸಚಿವರನ್ನು ಶ್ರೀಪೀಠದ ಸಿಬ್ಬಂದಿ ಪೂರ್ಣಕುಂಭ ಸ್ವಾಗತ ನೀಡಿ ಬರ ಮಾಡಿಕೊಂಡರು. ನಂತರ ಸಚಿವರು ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ದೇವಾಲಯ, ಭದ್ರಕಾಳಿ ಅಮ್ಮನವರ ದೇವಾಲಯ, ಜಗದ್ಗುರು ರೇಣುಕಾಚಾರ್ಯ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು.
ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಸಚಿವರು ಭೇಟಿಯಾಗಿ ಆಶೀರ್ವಾದ ಪಡೆದರು. ಜಗದ್ಗುರುಗಳು ಸಚಿವರಿಗೆ ಶಾಲು, ಹಾರ, ಲತಾಂಬೂಲ ನೀಡಿ ಗುರುರಕ್ಷೆ ಕೊಟ್ಟು ಆಶೀರ್ವದಿಸಿದರು. ಸಚಿವರು ಜಗದ್ಗುರುಗಳೊಂದಿಗೆ ಕೆಲಕಾಲ ಪ್ರಸ್ತುತ ವಿದ್ಯಮಾನಗಳ ಕುರಿತು ಚರ್ಚಿಸಿದರು.