ಯೋಜನೆಯಿಂದ ಮಳೆ ಕಾಡು ನಾಶ

14SGR1 raitha
ಸಾಗರದಲ್ಲಿ ಶಿವಮೊಗ್ಗ ಜಿಲ್ಲಾ ರೈತ ಸಂಘದಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿದರು. ಶಿವಾನಂದ ಕುಗ್ವೆ, ದಿನೇಶ್ ಶಿರವಾಳ, ಎನ್.ಡಿ.ವಸಂತಕುಮಾರ್, ರಮೇಶ್ ಕೆಳದಿ, ಭದ್ರೇಶ್ ಇತರರಿದ್ದರು.
Published on

ಸಾಗರ: ಪಶ್ಚಿಮ ಘಟ್ಟದ ಜಲಮೂಲವನ್ನೇ ನಾಶಪಡಿಸುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಸಾಧುವಲ್ಲ ಎಂದು ಸರ್ಕಾರಕ್ಕೆ ಏಕೆ ಅನಿಸುತ್ತಿಲ್ಲ. ವಿದ್ಯುತ್ ಉತ್ಪಾದಿಸುತ್ತೇವೆ ಎನ್ನುವ ನೆಪದಲ್ಲಿ ಮಳೆ ಕಾಡನ್ನು ನಾಶಮಾಡಲು ಹೊರಟಿದ್ದಾರೆ ಎಂದು ಶಾಸಕ ಹಾಗೂ ರೈತಪರ ಹೋರಾಟಗಾರ ದರ್ಶನ್ ಪುಟ್ಟಣ್ಣಯ್ಯ ಆತಂಕ ವ್ಯಕ್ತಪಡಿಸಿದರು.

ಉಪವಿಭಾಗಾಧಿಕಾರಿ ಕಚೇರಿ ಎದುರು ಶಿವಮೊಗ್ಗ ಜಿಲ್ಲಾ ರೈತ ಸಂಘದಿಂದ ಶರಾವತಿ ಪಂಪ್ಡ್ ಸ್ಟೋರೇಜ್ ವಿರೋಧಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಮಂಗಳವಾರ ಪಾಲ್ಗೊಂಡು ಮಾತನಾಡಿದರು.

ಸರ್ಕಾರ ಪರಿಸರ ಪರವಾದ ಯೋಜನೆ ರೂಪಿಸಬೇಕೇ ವಿನಃ ಮುಂದಿನ ಪೀಳಿಗೆಗೆ ಮಾರಕವಾದ ಯೋಜನೆಗಳನ್ನು ಅನುಷ್ಠಾನಕ್ಕೆ ತರಬಾರದು. ಹವಾಮಾನ ವೈಪರೀತ್ಯದಿಂದ ಅನೇಕ ವಷರ್ಗಳಿಂದ ರಾಜ್ಯದ ಬಹುತೇಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗುತ್ತಿದೆ. ಇಂತಹ ಹೊತ್ತಿನಲ್ಲಿ ಪಶ್ಚಿಮ ಘಟ್ಟದ ಹೃದಯ ಭಾಗವನ್ನು ಛಿದ್ರಗೊಳಿಸುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅವಕಾಶ ನೀಡಬಾರದು ಎಂದು ಹೇಳಿದರು.

ಪಂಪ್ಡ್ ಸ್ಟೋರೇಜ್ ಯೋಜನೆಗೆ ವನ್ಯಜೀವಿ ಮಂಡಳಿ ಅನುಮತಿ ನೀಡಿಲ್ಲ. ಯೋಜನೆಯ ವಿಸ್ತೃತ ವರದಿ ಪ್ರಕಟ ಮಾಡಿಲ್ಲ. ಸಾರ್ವಜನಿಕರ ಜತೆ ಚರ್ಚೆ ನಡೆಸಿಲ್ಲ. ಏಕಾಏಕಿ 10 ಸಾವಿರ ಕೋಟಿ ರೂ. ಯೋಜನೆ ಅನುಷ್ಠಾನಕ್ಕೆ ತರುವ ಸರ್ಕಾರದ ಕಾರ್ಯವೈಖರಿ ಖಂಡನೀಯ ಎಂದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ, ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಪ್ರಮುಖರಾದ ಎನ್.ಡಿ.ವಸಂತಕುಮಾರ್, ರಮೇಶ್ ಕೆಳದಿ, ಭದ್ರೇಶ್ ಬಾಳಗೋಡು, ಸತೀಶ್ ಅಂಗಡಿ, ಅಖಿಲೇಶ್ ಚಿಪ್ಪಳಿ, ಪರಮೇಶ್ವರ ದೂಗೂರು, ಕೆಂಪುಗೌಡ, ಕರಿಬಸಪ್ಪ ಗೌಡ, ಡಾ. ರಾಮಚಂದ್ರಪ್ಪ, ಎಚ್.ಬಿ.ರಾಘವೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net