

ದೇವನಹಳ್ಳಿ: ಆರೋಗ್ಯಕ್ಕಿಂತ ಮಿಗಿಲಾದ ಭಾಗ್ಯ ಮತ್ತೊಂದಿಲ್ಲ. ಇಂಥ ಬೆಲೆ ಕಟ್ಟಲಾಗದ ಆರೋಗ್ಯವನ್ನು ಸದಾ ಕಾಲ ರಕ್ಷಣೆ ಮಾಡಲು ಯೋಗ ಪರಿಣಾಮಕಾರಿ ಸಾಧನವಾಗಿದೆ. ಯೋಗದ ಮೂಲಕ ನಾವೆಲ್ಲರೂ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಕರೆ ನೀಡಿದರು.
ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ ಮಂಗಳವಾರ ದೇವನಹಳ್ಳಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಯೋಗ ದಿನ ಉದ್ಘಾಟಿಸಿ ಮಾತನಾಡಿದರು.
ಶಿಸ್ತುಬದ್ಧವಾಗಿ ಯೋಗಾಭ್ಯಾಸ ಮಾಡುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
8ನೇ ವರ್ಷದ ವಿಶ್ವಯೋಗ ದಿನಾಚರಣೆ ರಾಜ್ಯದ ಇತಿಹಾಸದಲ್ಲಿ ಅಚ್ಚಳಿಯದ ನೆನಪಾಗಿ ಉಳಿಯಲಿದೆ, ನರೇಂದ್ರಮೋದಿ ಮೈಸೂರಿನಲ್ಲಿ ಹಮ್ಮಿಕೊಂಡಿರುವ ಯೋಗದಿನದಲ್ಲಿ ಭಾಗವಹಿಸಿರುವುದು ಕನ್ನಡನಾಡಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ನಾನೂ ಹಲವು ವರ್ಷದಿಂದ ಪ್ರತಿನಿತ್ಯ 40 ನಿಮಿಷಗಳ ಕಾಲ ಯೋಗಾಭ್ಯಾಸ ಮಾಡುತ್ತೇನೆ. ಇದರಿಂದ ಮಾನಸಿಕ ಒತ್ತಡ ತಡೆದುಕೊಳ್ಳಲು ಸಾಧ್ಯವಾಗಿದೆ. ಅಧಿಕಾರಿಗಳು ಕ್ರೀಯಾಶೀಲರಾಗಿ ಕೆಲಸ ಮಾಡಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಯೋಗವೊಂದು ರಾಮಬಾಣವಿದ್ದಂತೆ ಎಂದರು.
ಯೋಗದ ಮಹತ್ವ ಅಪಾರ: ಅಧಿಕ ರಕ್ತದೊತ್ತಡ, ಮಧುಮೇಹ ಸೇರಿ ಹಲವು ಖಾಯಿಲೆಗಳ ನಿಯಂತ್ರಣಕ್ಕೆ ಯೋಗ ಅನುಕೂಲಕರವಾಗಿದೆ, ದೀರ್ಘವಾಗಿ ಉಸಿರಾಡುವುದರಿಂದ ಶ್ವಾಸಕೋಶಕ್ಕೆ ಆಮ್ಲಜನಕ ಸರಬರಾಜಾಗುತ್ತದೆ ಈ ಮೂಲಕ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯ ವೃದ್ಧಿಸುತ್ತದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.
ಯೋಗದ ತವರು ಭಾರತ, ಪುರಾಣ ಕಾಲದಿಂದಲೂ ಋಷಿ ಮುನಿಗಳು ಆರೋಗ್ಯಕ್ಕಾಗಿ ಯೋಗದ ಅಭ್ಯಾಸ ರೂಢಿಸಿಕೊಂಡಿದ್ದರು. ಆದ್ದರಿಂದ ಅವರು ನೂರಾರು ವರ್ಷ ಆರೋಗ್ಯವಂತರಾಗಿ ಜೀವಿಸಿದ್ದರು ಎಂಬುದನ್ನು ನಾವೆಲ್ಲ ಇತಿಹಾಸದಿಂದ ತಿಳಿದಿದ್ದೇವೆ ಎಂದರು.
2 ಸಾವಿರ ಯೋಗಾಸಕ್ತರು: ದೇವನಹಳ್ಳಿ ಕ್ರೀಡಾಂಗಣದಲ್ಲಿ 45 ನಿಮಿಷಗಳ ಕಾಲದ ಯೋಗಾಭ್ಯಾಸದಲ್ಲಿ ವಿದ್ಯಾರ್ಥಿಗಳು ಸೇರಿ 2 ಸಾವಿರದಷ್ಟು ಯೋಗಾಸಕ್ತರು ಭಾಗವಹಿಸಿದ್ದರು. ಇದೇ ವೇಳೆ, ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಮೂಡಿಸಲು ಕ್ರೀಡಾಂಗಣದ ಆವರಣದಲ್ಲಿ ಶಾಸಕರು ಹಾಗೂ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಗಿಡ ನೆಟ್ಟು ನೀರೆರೆದರು.