ಯೋಗಕ್ಷೇಮ: ಸರ್ವವ್ಯಾಪಕ ಸೂರ್ಯೋಪಾಸನೆ

Published on

ಸೂರ್ಯೋಪಾಸನಾ ಸ್ತೋತ್ರ ‘ಆದಿತ್ಯಹೃದಯ’ವನ್ನು ಪಠಿಸಿದ ನಂತರವೇ ಶ್ರೀರಾಮನು ರಾವಣನನ್ನು ಸಂಹರಿಸಲು ಸಮರ್ಥನಾದನು. ಧರ್ಮರಾಜನು ವನವಾಸದಲ್ಲಿದ್ದಾಗ ಭಾಸ್ಕರನನ್ನು ಮೆಚ್ಚಿಸಿ ಅಕ್ಷಯಪಾತ್ರೆಯನ್ನು ವರವಾಗಿ ಪಡೆದನು. ಅದರ ಸಹಾಯದಿಂದ ಸಾವಿರಾರು ಜನರಿಗೆ ಭೋಜನ ಮಾಡಿಸುತ್ತಿದ್ದನು. ಸೂರ್ಯಾರಾಧನೆ ಮಾಡಿ ದಿನವೂ ಮಣ ತೂಕ ಚಿನ್ನವನ್ನು ನೀಡುವ ಸ್ಯಮಂತಕ ಮಣಿಯನ್ನು ಪಡೆದ ಸತ್ರಾಜಿತನ ಕಥೆ ಹರಿವಂಶ ಗ್ರಂಥದಲ್ಲಿದೆ.

ಸೂರ್ಯಶತಕ ಬರೆದ ಮಯೂರ ಕಳೆದುಕೊಂಡಿದ್ದ ತನ್ನ ಕಣ್ಣನ್ನು ಮತ್ತೆ ಪಡೆದ ಕಥೆಯುಂಟು. ಶ್ರೀರಾಮ ಸೂರ್ಯವಂಶದವನು ಎಂಬುದನ್ನು ಎಲ್ಲರೂ ಬಲ್ಲರು. ಯಮಧರ್ಮ ಹಾಗೂ ನವಗ್ರಹಗಳಲ್ಲಿ ಒಬ್ಬನಾದ ಶನಿ ಇವರು ಸೂರ್ಯದೇವನ ಮಕ್ಕಳು. ಶೈವ-ವೈಷ್ಣವ-ಶಾಕ್ತಪಂಥಗಳಿದ್ದಂತೆ ಒಂದು ಕಾಲದಲ್ಲಿ ‘ಸೌರ’ಪಂಥದವರೂ ದೊಡ್ಡ ಸಂಖ್ಯೆಯಲ್ಲಿದ್ದರು. ಕಾಲಚಕ್ರ ಉರುಳಿದೆ. ಅವರ ಸಂಖ್ಯೆ ಕಡಿಮೆಯಾಗಿದೆ. ಆದರೂ ಅವರು ಆಚರಿಸುತ್ತಿದ್ದ ‘ಸೌರಮಾನ’ ಪದ್ಧತಿ ಇಂದಿಗೂ ಚಾಲ್ತಿಯಲ್ಲಿದೆ. ಹೀಗೆ ಹಲವೆಡೆ ಸೂರ್ಯನ ಬಗ್ಗೆ ವಿವರಗಳಿವೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣಪರಮಾತ್ಮ ಹೇಳುತ್ತಾನೆ - ‘ಜ್ಯೋತಿಷಾಂ ರವಿರಂಶುಮಾನ್’. ವಿಖ್ಯಾತ ಖಗೋಳಶಾಸ್ತ್ರಜ್ಞನೂ, ಜ್ಯೋತಿಷ್ಕನೂ ಆದ ವರಾಹಮಿಹಿರನು ತನ್ನ ‘ಬೃಹಜ್ಜಾತಕ’ ಗ್ರಂಥದಲ್ಲಿ ರವಿಯನ್ನು ಮೂರು ಲೋಕಗಳ ದೀಪವೆಂದು ಸ್ತುತಿಸಿದ್ದಾನೆ.

ಪುರಿಯ ಜಗನ್ನಾಥ ಮೂರ್ತಿಯು ಸೂರ್ಯಮಂಡಲದ ಸಂಕ್ಷಿಪ್ತರೂಪವೆಂದು ಡಾ. ಬ್ಲಾಕ್ ಎನ್ನುವವರು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿಯ ರಥೋತ್ಸವವು ವಿಶೇಷ ಮಹತ್ವವುಳ್ಳದ್ದು. ಮಧುರೆಯಲ್ಲಿ ನಡೆಯುವ ಸೂರ್ಯನ ರಥೋತ್ಸವದಲ್ಲಿ ಭಾಗಿಗಳಾದವರು, ಮಾಘಮಾಸ ಸಪ್ತಮೀ ತಿಥಿಯಲ್ಲಿ ಸಾಂಬಪುರದಲ್ಲಿ ನಡೆಯುವ ರಥಯಾತ್ರೆಯನ್ನು ಸಂದರ್ಶಿಸಿದರೆ ವಿಶೇಷ ಪುಣ್ಯ ಲಭಿಸುವುದೆಂದು ವರಾಹಪುರಾಣ ತಿಳಿಸುತ್ತದೆ. ಮಾಘ ಶುಕ್ಲ ಸಪ್ತಮಿಯಂದು ಯಾರು ಸ್ನಾನಾದಿಗಳನ್ನು ಮಾಡಿ ಶುಚಿರ್ಭತರಾಗಿ ಆದಿತ್ಯನಿಗೆ ಅಘ್ರ್ರ್ಯವನ್ನು ಕೊಡುತ್ತಾರೋ ಅವರು ಅಪೇಕ್ಷಿಸುವ ಸತ್ಪಲವನ್ನು ಪಡೆಯುತ್ತಾರೆ. ಚೈತ್ರಮಾಸ, ಮಕರ ಸಂಕ್ರಾಂತಿ, ಇತರ ಮಾಸ ಸಂಕ್ರಾಂತಿಗಳು, ವಿಷುವ ದಿನಗಳು, ಭಾನುವಾರ - ಈ ದಿವಸಗಳಂದು ಕೋಣಾರ್ಕದಲ್ಲಿರುವ ‘ಅರ್ಕ’ನ ಆರಾಧನೆಯು ಬಹು ಪುಣ್ಯಪ್ರದವಾದದ್ದು.

ಸೂರ್ಯನೇ ಪ್ರಧಾನ ದೇವತೆಯಾದ ದೇವಾಲಯಗಳು ಭರತಖಂಡದಲ್ಲಿ ವಿರಳ. ಕಾಶ್ಮೀರದಲ್ಲಿ ಮಾರ್ತಾಂಡ, ಪಶ್ಚಿಮತೀರದ ಗುಜರಾತ್​ನಲ್ಲಿ ಮೊಟೇರಾ, ಪೂರ್ವತೀರದಲ್ಲಿ ಕೋಣಾರ್ಕ, ದಕ್ಷಿಣದಲ್ಲಿ ಸೂರ್ಯನಾರ್ ಕೋವಿಲ್ ಎಂಬವು ಬಹು ಪ್ರಸಿದ್ಧವಾದವು. ಕಾಶ್ಮೀರದ ಮಾರ್ತಾಂಡಾಲಯ ಸೂರ್ಯದೇವಸ್ಥಾನವನ್ನು ಅಲ್ಲಿನ ದೊರೆ ಲಲಿತಾದಿತ್ಯನು ಕಟ್ಟಿಸಿದನು. ಅಲ್ಲಿ ಸೂರ್ಯಾರಾಧನೆಗೆ ಅರಸರಿಂದಲೇ ಪ್ರೋತ್ಸಾಹವಿತ್ತು. ಕಾಶ್ಮೀರದ ಹಿಂದೂಗಳು ಒತ್ತಾಯಪೂರ್ವಕವಾಗಿ ಅನ್ಯಮತಕ್ಕೆ ಪರಿವರ್ತನೆಯಾದ ಮೇಲೂ ಮಾರ್ತಾಂಡನನ್ನು ಪೂಜಿಸುತ್ತಿದ್ದರು. ಅಲ್ಲಿರುವ ಮಹಮ್ಮದೀಯರಲ್ಲಿ ಈಗಲೂ ‘ಶಮ್​ ಶೀಯ’ ಎಂಬ ಒಂದು ಪಂಥ ಇದೆ. ಹಾಗೆಂದರೆ ಸೂರ್ಯಾರಾಧಕರು ಎಂದರ್ಥ. ಅರಬ್ಬಿ ಭಾಷೆಯಲ್ಲಿ ಸೂರ್ಯನನ್ನು ‘ಶಮಸ್’ ಎಂದು ಕರೆಯುತ್ತಾರೆ. 18ನೇ ಶತಮಾನದಲ್ಲಿದ್ದ ಶಮ್ಮಸ್ ಮುಲ್ತಾನಿ ಎಂಬ ಪ್ರಸಿದ್ಧ ಸಂತ ಆದಿತ್ಯನ ಪರಮ ಭಕ್ತನೂ ಆಗಿದ್ದನು.

ದ್ವಿಪಾದ ಪ್ರಸರಣಾಸನ: ಸೂರ್ಯನಮಸ್ಕಾರದ ಏಕಪಾದ ಪ್ರಸರಣಾಸನದ ನಂತರ ಎರಡೂ ಕಾಲುಗಳನ್ನು ಶ್ವಾಸ ಬಿಡುತ್ತ ಹಿಂದಕ್ಕೆ ಚಾಚುವುದು. ಎರಡೂ ಹಸ್ತಗಳ ಹಾಗೂ ಮುಂದಿನ ಪಾದ, ಬೆರಳುಗಳ ಮೇಲೆ ಸಮಭಾರವಿರಲಿ. ಮೇಲೆ ಕೆಳಗೆ ಬಗ್ಗದೆ ಶರೀರವು ಅಡ್ಡ ನಿಲ್ಲಿಸಿದ ಕೋಲಿನಂತೆ, ಜಾರುಬಂಡೆಯಂತೆ ಚತುರಂಗ ದಂಡಾಸನ ಸ್ಥಿತಿಯಲ್ಲಿ ಸ್ಥಿರವಾಗಿ ಸುಖವಾಗಿರಲಿ.

ಲಾಭಗಳು: ಹಸ್ತ, ಭುಜಗಳ ಬಲವೃದ್ಧಿ. ತೋಳಿನ ಪೆಡಸುತನ ನಿವಾರಣೆ. ಬೊಜ್ಜು ಕರಗಲು ಸಹಾಯಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net