

ಹುಣಸೂರು: ಯೋಗಾಭ್ಯಾಸ ಪ್ರತಿಯೊಬ್ಬರ ಮನೆಯಲ್ಲಿ ನಿತ್ಯ ಕಾರ್ಯವಾಗಬೇಕಿದೆ ಎಂದು ಗದಗ ಜಿಲ್ಲೆಯ ಯೋಗಗುರು ವೀರೇಶ್ ಗುರೂಜಿ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ಹುಣಸೂರಿನ ಅಂಜನಾದ್ರಿ ಯೋಗ ಕೇಂದ್ರ, ಹನುಮಂತೋತ್ಸವ ಸಮಿತಿ ಮತ್ತು ಗದಗದ ಬಸವ ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಯೋಗಾಭ್ಯಾಸ ಮತ್ತು ನಿಸರ್ಗ ಚಿಕಿತ್ಸಾ ಶಿಬಿರದ ಸಮಾರೋಪ ಸಮಾರಂಭ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೋಗ ಮತ್ತು ಧ್ಯಾನ ಎನ್ನುವುದು ಕೇವಲ ತೋರಿಕೆಯ ಕಲಿಕೆಯಾಗಬಾರದು. ಯೋಗ ಈ ನೆಲದಿಂದ ಇಡೀ ವಿಶ್ವಕ್ಕೆ ನೀಡಿದ ಪವಿತ್ರ ವರವಾಗಿದೆ. ಆದರೆ, ನಾವಿನ್ನೂ ಯೋಗದ ಮಹತ್ವ ತಿಳಿದುಕೊಂಡಿಲ್ಲ. ಯುವಸಮೂಹ ಈ ದಿಕ್ಕಿನಲ್ಲಿ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.
ಶಿಬಿರದ ಪ್ರಧಾನ ಸಂಚಾಲಕ ವಿ.ಎನ್.ದಾಸ್ ಮಾತನಾಡಿ, 15 ದಿನಗಳ ಕಾಲ ಆಯೋಜಿಸಿದ್ದ ಶಿಬಿರದಲ್ಲಿ ವೀರೇಶ್ ಗುರೂಜಿ ಅವರು ಬೆಳಗಿನ ವ್ಯಾಯಾಮ, ಆಸನಗಳು, ವಿವಿಧ ಕಾಯಿಲೆಗಳಿಗೆ ಮನೆಯಲ್ಲಿ ಮಾಡಿಕೊಳ್ಳಬಹುದಾದ ಔಷಧೋಪಚಾರಗಳು, ಉಪವಾಸ ಕ್ರಮ, ದೇಹ ಮತ್ತು ಹೊಟ್ಟೆ ಶುದ್ಧೀಕರಣ, ಮಡ್‌ಬಾತ್ ಮುಂತಾದ ವಿಷಯ ಕುರಿತು ತಿಳಿಸಿಕೊಡುವ ಮೂಲಕ ಸಾಕಷ್ಟು ಮಂದಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಸಂತಸವ್ಯಕ್ತಪಡಿಸಿದರು.
ಯೋಗಗುರು ತಿಮ್ಮಯ್ಯ, ಡಾ.ಸರೋಜಿನಿ ವಿಕ್ರಂ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ನಾಗಶ್ರೀ ಅಕ್ಕ, ವಿಚಾರ ಪ್ರಜ್ಞೆ ಪತ್ರಿಕೆಯ ಸಂಪಾದಕ ಸುರೇಶ್,ಮೋಹನ್, ದೀನಾ, ಮುಕುಂದ್, ಮನೋಹರ್ ಶಿಬಿರಾರ್ಥಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.