ಯೂಟ್ಯೂಬರ್‌ಗೆ ನೋಟಿಸ್ ಜಾರಿ ಮಾಡಿದ ಪೊಲೀಸರು

rahul
Published on

ಬೆಂಗಳೂರು: ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ವಿಡಿಯೋ ಹರಿಬಿಟ್ಟ ಆರೋಪಕ್ಕೆ ಸಂಬಂಧಿಸಿದಂತೆ ನೋಯ್ಡ ಮೂಲದ ಅಜಿತ್ ಭಾರ್ತಿ ಎಂಬ ಯೂಟ್ಯೂಬರ್‌ಗೆ ಗುರುವಾರ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ನೋಟಿಸ್ ಸ್ವೀಕರಿಸಿದ ಏಳು ದಿನಗಳ ಒಳಗಾಗಿ ಬೆಳಗ್ಗೆ ೧೧ ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ಏನಿದು ಪ್ರಕರಣ?
ರಾಮ ಮಂದಿರದ ಜಾಗದಲ್ಲಿ ಬಾಬರಿ ಮಸೀದಿ ಮರು ನಿರ್ಮಾಣ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಅಜಿತ್ ಭಾರ್ತಿ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ವಿಡಿಯೋ ಹರಿಬಿಟ್ಟಿದ್ದರು. ಈ ಸಂಬಂಧ ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಹಾಗೂ ವಕೀಲ ಬಿ.ಕೆ.ಬೋಪಣ್ಣ ಅವರು ನೀಡಿದ ದೂರು ಆಧರಿಸಿ ಪೊಲೀಸರು ಅಜಿತ್ ಭಾರತಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ರಾಮ ಮಂದಿರದ ವಿಚಾರವಾಗಿ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಅಜಿತ್ ಭಾರ್ತಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸುತ್ತಿದ್ದಾರೆ. ರಾಮ ಮಂದಿರದ ಜಾಗದಲ್ಲಿ ಬಾಬರಿ ಮಸೀದಿ ಮರು ನಿರ್ಮಾಣ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿರುವುದಾಗಿ ಅಜಿತ್ ಭಾರತಿ ಸುಳ್ಳು ವಿಡಿಯೋ ಹಂಚಿಕೊಳ್ಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಆದರೆ, ರಾಹುಲ್ ಗಾಂಧಿಯವರು ಭಾಷಣದಲ್ಲಿ ಆ ರೀತಿ ಹೇಳಿಲ್ಲ. ಜನರಲ್ಲಿ ವಿಭಜನೆಯ ಭಾವ ಉಂಟು ಮಾಡಲು ಮತ್ತು ಕೋಮು ದ್ವೇಷ ಹರಡಲು ಸ್ವಯಂ ಘೋಷಿತ ಪತ್ರಕರ್ತ, ಲೇಖಕ ಅಜಿತ್ ಭಾರ್ತಿ ವಿವಾದಾತ್ಮಕ ಪೋಸ್ಟ್ ಹಾಕಿದ್ದಾರೆ. ಹೀಗಾಗಿ, ಅಜಿತ್ ಭಾರತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬೋಪಣ್ಣ ದೂರಿನಲ್ಲಿ ಮನವಿ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net