

ಎರಡೂ ದೇಶಗಳ ನಡುವಿನ ವಿವಾದ ಈಗ ತೀವ್ರಸ್ವರೂಪ ಪಡೆದುಕೊಂಡಿರುವುದೇಕೆ ಎಂಬ ಪ್ರಶ್ನೆಗೆ ಉತ್ತರ ಸರಳ. ಯೂಕ್ರೇನ್ ಅಮೆರಿಕದ ಪರವಾಗಿ ವಾಲಿದೆ, ನ್ಯಾಟೋಗೆ ಸೇರುತ್ತಿದೆ ಎಂಬುದೇ ರಷ್ಯಾದ ಆಕ್ರೋಶಕ್ಕೆ ಕಾರಣ. 2010-13ರ ಅವಧಿಯಲ್ಲಿ ಯೂಕ್ರೇನ್ ಅಧ್ಯಕ್ಷರಾಗಿದ್ದ ವಿಕ್ತೊರ್ ಯಾನುಕೋವಿಚ್ ರಷ್ಯಾ ಪರ ಹೆಚ್ಚು ಒಲವು ಹೊಂದಿದ್ದರು. ಅಲ್ಲದೆ, ಎರಡೂ ದೇಶಗಳ ನಡುವಿನ ಸಹಬಾಳ್ವೆ ಪರಸ್ಪರರಿಗೆ ಅನುಕೂಲಕರ ಹಾಗೂ ಅವಶ್ಯಕವೆಂದು ನಂಬಿದ್ದರು. ಈ ಹಿನ್ನೆಲೆಯಲ್ಲಿ ದೇಶವನ್ನು ಪಶ್ಚಿಮದ ಆಮಿಷಗಳಿಂದ ದೂರವಿರಿಸಿಕೊಂಡಿದ್ದರು. ಆದರೆ ಯೂಕ್ರೇನಿಯನ್ ಜನತೆಯನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನವನ್ನು ಪಶ್ಚಿಮ ಜಗತ್ತು ಮುಂದುವರಿಸಿ ಯಶಸ್ವಿಯೂ ಆಯಿತು. ಪರಿಣಾಮವಾಗಿ ಅಧ್ಯಕ್ಷ ಯಾನುಕೋವಿಚ್ ಅಧಿಕಾರ ಕಳೆದುಕೊಂಡರು. ಡೆಮೊಕ್ರಾಟಿಕ್ ಅಧ್ಯಕ್ಷ ಬರಾಕ್ ಒಬಾಮ ಮತ್ತು ಜರ್ಮನಿಯ ಛಾನ್ಸಲರ್ ಏಂಗೆಲಾ ಮೆರ್ಕೆಲ್ ಈ ನೀತಿಯ ಹಿಂದಿದ್ದರು. ಆಯಕಟ್ಟಿನ ಯೂಕ್ರೇನನ್ನು ಸೆಳೆದುಕೊಂಡು ಅಷ್ಟರಮಟ್ಟಿಗೆ ರಷ್ಯಾಗೆ ಸಾಮರಿಕ ತಡೆಗಳನ್ನೊಡ್ಡುವುದು ಇದರ ಉದ್ದೇಶವಾಗಿತ್ತು. ಈ ಕ್ರಮಗಳಿಂದ ರಷ್ಯಾ ಅಧ್ಯಕ್ಷ ಪುತಿನ್ ಮತ್ತಷ್ಟು ಕೆರಳಿದರು. ನಂತರದ ವರ್ಷಗಳಲ್ಲಿ ಯೂಕ್ರೇನ್ ರಷ್ಯಾದಿಂದ ಮತ್ತಷ್ಟು ದೂರ ಸರಿಯತೊಡಗಿತು. ಅಧ್ಯಕ್ಷ ಪೆತ್ರೋ ಪೊರೊಶೆಂಕೋ (2014-19) ಕಾಲದಲ್ಲಿ ಆರಂಭಗೊಂಡ ಈ ಪ್ರಕ್ರಿಯೆ, ಪ್ರಸಕ್ತ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಅವಧಿಯಲ್ಲೂ ಮುಂದುವರಿದಿದೆ.
ಅಮೆರಿಕವು ಯೂಕ್ರೇನ್ ಅನ್ನು ನ್ಯಾಟೋಗೆ ಸೇರ್ಪಡೆಗೊಳಿಸುವ ನೆಪದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಯೂಕ್ರೇನ್ನಲ್ಲಿ ಸಂಗ್ರಹಿಸುತ್ತಿದೆ. ಜಂಟಿ ಸಮರಾಭ್ಯಾಸಗಳನ್ನೂ ನಡೆಸಿದೆ. ರಷ್ಯಾದ ಹತ್ತಿರದಲ್ಲೇ ನಡೆಯುತ್ತಿರುವ ಈ ಚಟುವಟಿಕೆಗಳು ರಷ್ಯಾದ ಸಾರ್ವಭೌಮತ್ವಕ್ಕೆ ಅಪಾಯಕಾರಿ. ಯಾವುದೇ ಕಾರಣಕ್ಕೂ ನ್ಯಾಟೋವನ್ನು ಪೂರ್ವಕ್ಕೆ ವಿಸ್ತರಿಸಬಾರದು ಎಂಬ ಎಚ್ಚರಿಕೆಯನ್ನು ಪುತಿನ್ ಹಲವು ಬಾರಿ ನೀಡಿದ್ದರು. ಆದರೆ, ಇದಕ್ಕೆ ಕಿವಿಗೊಡದ ಅಮೆರಿಕ ಯೂಕ್ರೇನ್ ಅನ್ನು ನ್ಯಾಟೋಗೆ ಸೇರಿಸಲು ತುದಿಗಾಲಿನಲ್ಲಿ ನಿಂತಿದೆ.
ಉತ್ತರ ಅಟ್ಲಾಂಟಿಕ್ ಒಕ್ಕೂಟ (ನ್ಯಾಟೋ) ಉತ್ತರ ಅಮೆರಿಕದ ಮತ್ತು ಯುರೋಪ್ನ 29 ರಾಷ್ಟ್ರಗಳು ಸೇರಿ ರಚಿಸಿಕೊಂಡಿರುವ ಅಂತರ-ಸರ್ಕಾರದ ಸೇನಾ ಸಹಕಾರ ಸಂಘಟನೆ. 1949ರ ಏಪ್ರಿಲ್ 4ರಂದು 12 ರಾಷ್ಟ್ರಗಳು ಒಗ್ಗೂಡಿ ಈ ಒಕ್ಕೂಟ ರಚಿಸಿಕೊಂಡವು. ನಂತರದಲ್ಲಿ ಉಳಿದ ರಾಷ್ಟ್ರಗಳು ಸೇರ್ಪಡೆಯಾದವು. ಪ್ರಧಾನ ಕಚೇರಿ ಬೆಲ್ಜಿಯಂನ ಬ್ರುಸೆಲ್ಸ್ನಲ್ಲಿದೆ. ಒಕ್ಕೂಟದ ಸದಸ್ಯ ರಾಷ್ಟ್ರದ ಮೇಲೆ ಆಕ್ರಮಣ ನಡೆದಾಗ ದಾಳಿಗೆ ತುತ್ತಾದ ದೇಶ ನ್ಯಾಟೋ ಸಹಕಾರ ಪಡೆದು ಶತ್ರುವನ್ನು ನಿಗ್ರಹಿಸಬಹುದು. ಅಫ್ಘಾನಿಸ್ತಾನದಲ್ಲಿ ಅಲ್-ಖೈದಾ ವಿರುದ್ಧ ನಡೆದ ಯುದ್ಧದಲ್ಲಿ ನ್ಯಾಟೋ ಪಡೆಗಳು ತೊಡಗಿಸಿಕೊಂಡಿದ್ದವು.
ಹೀಗಿದೆ ಕ್ರಿಮಿಯಾ: 27 ಸಾವಿರ ಚದರ ಕಿಲೋ ಮೀಟರ್ ವಿಸ್ತಾರದ ಕ್ರಿಮಿಯಾ ಯೂಕ್ರೇನ್ ಮತ್ತು ರಷ್ಯಾ ನಡುವಿನ ಒಂದು ಭೂಭಾಗ. ಈ ಪ್ರದೇಶದಲ್ಲಿ ರಷ್ಯನ್ನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ (ಶೇಕಡ 65). ಯೂಕ್ರೇನಿಯರ ಸಂಖ್ಯೆ ಶೇ.35. ಜಾಗತಿಕ ಸಮುದಾಯ ಇದನ್ನು ಯೂಕ್ರೇನಿನ ಭೂಭಾಗ ಎಂದು ಪರಿಗಣಿಸಿದೆಯಾದರೂ, ಪ್ರಸಕ್ತ ಇದೀಗ ರಷ್ಯಾದ ವಶದಲ್ಲಿದೆ.
ಬಂಡುಕೋರ ಸಂಘಟನೆಗಳ ಹಾವಳಿ: ಕ್ರಿಮಿಯಾದಲ್ಲಿ ಬಂಡುಕೋರ ಸಂಘಟನೆಗಳೂ ಹುಟ್ಟಿಕೊಂಡಿದ್ದು, ಇವುಗಳಿಗೆ ರಷ್ಯಾ ಬೆಂಬಲವಾಗಿ ನಿಂತಿದೆ. ಮಾತ್ರವಲ್ಲ, ಅವುಗಳಿಗೆ ಶಸ್ತ್ರಾಸ್ತ್ರಗಳನ್ನೂ ಒದಗಿಸಿದೆ. ಈ ಹಿಂದೆ ಈ ಬಂಡುಕೋರರು ಯೂಕ್ರೇನ್ಗೆ ನುಗ್ಗಿ, ಹಿಂಸಾಚಾರ ನಡೆಸಿದ ನಿದರ್ಶನಗಳಿವೆ. ‘ಯೂಕ್ರೇನ್ನಿಂದ ಕ್ರಿಮಿಯಾಕ್ಕೆ ಸ್ವಾತಂತ್ರ್ಯ ನೀಡಬೇಕು’ ಎಂಬುದೇ ಈ ಬಂಡುಕೋರ ಸಂಘಟನೆಗಳ ಪ್ರಮುಖ ಬೇಡಿಕೆ. ಈ ಗಲಭೆ, ದೊಂಬಿ, ಗಲಾಟೆಗಳಲ್ಲಿ 14 ಸಾವಿರಕ್ಕೂ ಅಧಿಕ ಜನರು ಪ್ರಾಣತೆತ್ತಿದ್ದಾರೆ. ಹಲವೆಡೆ ಬಂಡುಕೋರರು ಮೇಲುಗೈ ಸಾಧಿಸಿದ್ದಾರೆ. ಯೂಕ್ರೇನಿನ ದೊನ್ಬಾಸ್, ಲುಹಾನ್ಸ್್ಕ ಸೇರಿದಂತೆ ಹಲವು ಪ್ರದೇಶಗಳನ್ನು ಬಂಡುಕೋರರು ವಶಪಡಿಸಿಕೊಂಡಿದ್ದಾರೆ.
ಯುದ್ಧ ಭುಗಿಲೆದ್ದ ಬಗೆ: ಯುರೋಪ್ನಲ್ಲಿ ರಷ್ಯಾದ ಬಳಿಕ ದೊಡ್ಡರಾಷ್ಟ್ರ ಯೂಕ್ರೇನ್. ಇದರ ಜನಸಂಖ್ಯೆ ಸುಮಾರು 6 ಕೋಟಿ. ರಾಜಧಾನಿ ಕಿಯೆವ್. ರಷ್ಯಾದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಯೂಕ್ರೇನ್ ಮುಂಚೆ ಸೋವಿಯತ್ ರಷ್ಯಾದ ಭಾಗವೇ ಆಗಿತ್ತು. 1991ರಲ್ಲಿ ಸೋವಿಯತ್ ರಷ್ಯಾ ಪತನಗೊಂಡು, ಛಿದ್ರವಾದ ಬಳಿಕ ಯೂಕ್ರೇನ್ ಸ್ವತಂತ್ರ ರಾಷ್ಟ್ರವಾಯಿತು. ಸ್ವಾತಂತ್ರ್ಯ ಗಳಿಸುತ್ತಲೇ ರಷ್ಯಾದಿಂದ ದೂರವಾಗುತ್ತ, ನ್ಯಾಟೋ (ಘಟ್ಟಠಿಜ ಅಠ್ಝಿಚ್ಞಠಿಜ್ಚಿ ಖ್ಟಛಿಚಠಿಢ ಣ್ಟಜಚ್ಞಜ್ಢಿಚಠಿಜಿಟ್ಞ) ದೇಶಗಳಿಗೆ ಹತ್ತಿರವಾಯಿತು. ಯೂಕ್ರೇನಿಯರು ರಷ್ಯಾದಿಂದ ದೂರವಾಗಲು ಕಾರಣ ಅವರು ಕಮ್ಯುನಿಸಂನಿಂದ ಬೇಸತ್ತಿದ್ದರು ಮತ್ತು ಯುರೋಪಿನ ಮುಕ್ತ ಪ್ರಜಾಪ್ರಭುತ್ವದತ್ತ ಆಕರ್ಷಿತರಾದರು. ಯೂಕ್ರೇನ್ ಆಯಕಟ್ಟಿನ ಪ್ರದೇಶ. ಇಲ್ಲಿ ಅಮೆರಿಕ-ಯುರೋಪ್ ಪ್ರಭಾವ ವಿಸ್ತರಿಸುತ್ತಿರುವುದನ್ನು ರಷ್ಯಾ ತನಗೆ ಬೆದರಿಕೆ ಎಂದು ಆತಂಕಗೊಂಡಿದೆ. ಅಮೆರಿಕ-ಯುರೋಪ್ ಪ್ರಭಾವವನ್ನು ತಗ್ಗಿಸುವುದು ಮತ್ತು ಯೂಕ್ರೇನನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಉದ್ದೇಶ ರಷ್ಯಾದ್ದು. ಈ ಹಿಂದೆ ಎಚ್ಚರಿಕೆ, ಹೇಳಿಕೆಗಳಿಂದ ಮುಂದುವರಿದು ಗಂಭೀರ ಬಿಕ್ಕಟ್ಟಿನ ಸ್ವರೂಪ ಪಡೆದ ಬಳಿಕ ಗುರುವಾರ ಯೂಕ್ರೇನ್ ಮೇಲೆ ರಷ್ಯಾ ದಾಳಿ ಮೂಲಕ ಯುದ್ಧವೇ ಆರಂಭಗೊಂಡಿದೆ.
ಅಮೆರಿಕದ ಭರವಸೆ ನಂಬಿ ಅಣ್ವಸ್ತ್ರ ತ್ಯಜಿಸಿದ್ದ ಯೂಕ್ರೇನ್!: ರಷ್ಯಾ ವಿರುದ್ಧ ಯೂಕ್ರೇನ್ ಬಲಹೀನಗೊಂಡಿದ್ದು ತನ್ನ ತಪ್ಪಿನಿಂದಲೇ ಎಂದು ಯೂಕ್ರೇನ್ ಸಂಸದರೊಬ್ಬರು ಹೇಳಿದ್ದಾರೆ. ಅಮೆರಿಕ, ಬ್ರಿಟನ್ ಮತ್ತು ರಷ್ಯಾದ ಭರವಸೆಯ ಮಾತುಗಳನ್ನು ನಂಬಿ 1994ರಲ್ಲಿ ಯೂಕ್ರೇನ್ ವಿಶ್ವದ ಮೂರನೇ ಅತಿದೊಡ್ಡ ಪರಮಾಣು ಶಸ್ತ್ರಾಗಾರವನ್ನು ತ್ಯಜಿಸಿತು. ಈ ಮೂಲಕ ನಿಶ್ಯಸ್ತ್ರಗೊಂಡಿತು ಎಂದು ಯೂಕ್ರೇನ್ ಸಂಸತ್ ಸದಸ್ಯ ಅಲೆಕ್ಸಿ ಗೊಂಚರೆಂಕೊ ಬೇಸರ ವ್ಯಕ್ತಪಡಿಸಿದ್ದಾರೆ. 1991ರಲ್ಲಿ ಸೋವಿಯತ್ ಒಕ್ಕೂಟ ಪತನಗೊಂಡ ಬಳಿಕ ಸಾವಿರಾರು ಪರಮಾಣು ಶಸ್ತ್ರಾಸ್ತ್ರಗಳು ಯೂಕ್ರೇನ್ ಬಳಿ ಉಳಿದುಕೊಂಡಿದ್ದವು. ಕೆಲವು ವರ್ಷಗಳ ನಂತರ ‘ಬುಡಾಪೆಸ್ಟ್ ಒಪ್ಪಂದ’ಕ್ಕೆ ಸಹಿ ಹಾಕಿದ ಯೂಕ್ರೇನ್, ಅಮೆರಿಕದ ಭದ್ರತಾ ಖಾತರಿಗಳಿಗೆ ಪ್ರತಿಯಾಗಿ ಅಣ್ವಸ್ತ್ರಗಳನ್ನು ತ್ಯಜಿಸಿತು. ಇದು ದೊಡ್ಡ ಪ್ರಮಾದವೇ ಹೌದು ಎಂದು ಅವರು ವಿವರಿಸಿದರು. ಸೇನಾಬಲದಲ್ಲಿ ರಷ್ಯಾಗಿಂತ ತುಂಬ ದುರ್ಬಲವಾಗಿರುವ ಯೂಕ್ರೇನ್ ಈಗ ಬೆಂಬಲಕ್ಕಾಗಿ ವಿಶ್ವಸಂಸ್ಥೆ ಮತ್ತು ಪಾಶ್ಚಾತ್ಯ ರಾಷ್ಟ್ರಗಳ ಮಿತ್ರರಾಷ್ಟ್ರಗಳನ್ನು ಅವಲಂಬಿಸಿದೆ. ಆದರೆ, ನ್ಯಾಟೋ ತನ್ನ ಸೇನಾ ಪಡೆಯನ್ನು ಯೂಕ್ರೇನ್ಗೆ ರವಾನಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ನ್ಯಾಟೋ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲೆನ್ಬರ್ಗ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಯೂಕ್ರೇನ್ಗೆ ಆರಂಭಿಕ ಹಂತದಲ್ಲೇ ಹಿನ್ನಡೆಯಾಗಿದೆ.
ಹಲವು ಪ್ರಯತ್ನಗಳು: ಯೂಕ್ರೇನ್ ತನ್ನ ಕೈತಪು್ಪತ್ತಿದೆ ಎಂದೆನಿಸಿದಾಗಲೆಲ್ಲ ರಷ್ಯಾ ಒತ್ತಡದ ಕ್ರಮಗಳನ್ನು ಕೈಗೊಂಡಿದೆ. ಮುಖ್ಯವಾಗಿ, ಯೂಕ್ರೇನ್ಗೆ ಇಂಧನ ಮತ್ತಿತರ ಪೂರೈಕೆಗಳನ್ನು ನಿಲ್ಲಿಸುತ್ತಿತ್ತು. ಆದರೂ, ವಿಕ್ತೊರ್ ಯಾನುಕೋವಿಚ್ ಯುರೋಪಿಯನ್ ಒಕ್ಕೂಟದ ಜತೆಗೆ ಒಪ್ಪಂದ ಮಾಡಿಕೊಳ್ಳಲು ನಿರಾಕರಿಸಿ, ಮಾಸ್ಕೋದೊಂದಿಗೆ ಸ್ನೇಹದ ಹಸ್ತ ಚಾಚಿದರು. ಯೂಕ್ರೇನ್ ಜನತೆ ಇದನ್ನು ವಿರೋಧಿಸಿ ತೀವ್ರ ಪ್ರತಿಭಟನೆ ನಡೆಸಿದ ಪರಿಣಾಮವೇ ಯಾನುಕೋವಿಚ್ 2014ರಲ್ಲಿ ಪದಚ್ಯುತಗೊಂಡರು.
ತೀವ್ರಗೊಂಡ ತಿಕ್ಕಾಟ: ವಿಕ್ತೊರ್ ಯಾನುಕೋವಿಚ್ ಪದಚ್ಯುತಿ ಬಳಿಕ ಯೂಕ್ರೇನ್ ಅಧ್ಯಕ್ಷರಾಗಿದ್ದು ಪೆತ್ರೋ ಪೊರೊಶೆಂಕೋ (2014-19). ಇವರು ಅಧ್ಯಕ್ಷರಾದ ಬಳಿಕ ಮಾಸ್ಕೋದೊಂದಿಗಿನ ಎಲ್ಲ ಒಪ್ಪಂದಗಳನ್ನು ರದ್ದು ಮಾಡಿದರು. ಅಷ್ಟೇ ಅಲ್ಲ, ಯುರೋಪಿಯನ್ ಒಕ್ಕೂಟಕ್ಕೆ ಹತ್ತಿರವಾಗತೊಡಗಿದರು. ಇದರಿಂದ ಮತ್ತೆ ರಷ್ಯಾ-ಯೂಕ್ರೇನ್ ನಡುವಿನ ತಿಕ್ಕಾಟ ತೀವ್ರಗೊಂಡಿತು.
ರಷ್ಯಾದ ಆತಂಕ: ಪೂರ್ವ ಯುರೋಪಿನ ದೇಶಗಳು ಒಂದೊಂದಾಗಿ ನ್ಯಾಟೋಗೆ ಸೇರ್ಪಡೆ ಯಾಗಿವೆ. ಒಂದು ಕಾಲದಲ್ಲಿ ಮಾಸ್ಕೋದ ಪ್ರಭಾವವಲಯದೊಳಗಿದ್ದ ಪೋಲೆಂಡ್, ಝೆಕ್ ರಿಪಬ್ಲಿಕ್, ಸ್ಲೊವಾಕಿಯಾ, ಹಂಗೆರಿ, ಬಲ್ಗೇರಿಯಾ ಮತ್ತು ರುಮೇನಿಯಾಗಳಲ್ಲದೆ ಸೋವಿಯತ್ ಯೂನಿಯನ್ನದೇ ಭಾಗಗಳಾಗಿದ್ದ ಲಾತ್ವಿಯಾ, ಎಸ್ತೋನಿಯಾ ಮತ್ತು ಲಿಥುವೇನಿಯಾ ಇಂದು ನ್ಯಾಟೋದ ಸದಸ್ಯರಾಗಿವೆ! ಅಂದರೆ ನ್ಯಾಟೋ ರಷ್ಯಾದ ಗಡಿಗೇ ಬಂದು ನಿಂತಿದೆ! ಅಷ್ಟು ಸಾಲದೆಂಬಂತೆ ಯೂಕ್ರೇನ್ ಕೂಡ ನ್ಯಾಟೋಗೆ ಹತ್ತಿರವಾಗಿರುವುದು ಅಧ್ಯಕ್ಷ ಪುತಿನ್ರನ್ನು ಕೆರಳಿಸಿದೆ.