ಯುವತಿ ಜತೆಗೆ ಅಸಭ್ಯವಾಗಿ ವರ್ತಿಸಿದ್ದ ಆರೋಪಿ ಸೆರೆ

Crime Logo
Published on

ಬೆಂಗಳೂರು: ನಡೆದು ಹೋಗುತ್ತಿದ್ದ ಯುವತಿ ಜತೆಗೆ ಅಸಭ್ಯವಾಗಿ ವರ್ತಿಸಿದ್ದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಿಲಕನಗರದ ಯಾಸೀನ್(೨೪) ಬಂಧಿತ. ೧೯ ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರುದಾರೆ ಯುವತಿ ಜ.೧೭ರಂದು ಸಂಜೆ ೬.೧೫ಕ್ಕೆ ಜಯನಗರ ೩ನೇ ಬ್ಲಾಕ್‌ನ ಬಸ್ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದಿರುವ ಆರೋಪಿ, ಜಯನಗರ ೩ನೇ ಬ್ಲಾಕ್‌ನ ೩೬ನೇ ಅಡ್ಡರಸ್ತೆ ಎಲ್ಲಿ ಬರಲಿದೆ ಎಂದು ಕೇಳಿದ್ದಾನೆ. ಇದಕ್ಕೆ ಯುವತಿ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಬಳಿಕ ಸ್ವಲ್ಪ ಮುಂದಕ್ಕೆ ಹೋಗುವ ಆರೋಪಿಯು ಮತ್ತೆ ವಾಪಾಸ್ ಯುವತಿ ಬಳಿ ಬಂದು ತನ್ನ ಮೊಬೈಲ್ ತೆಗೆದು ನಗ್ನ ಚಿತ್ರವನ್ನು ತೋರಿಸಿದ್ದಾನೆ. ಈತನ ವರ್ತನೆಯಿಂದ ಯುವತಿ ಗಾಬರಿಗೊಂಡಿದ್ದಾರೆ. ಬಳಿಕ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೇರೆ ಯುವತಿಯರಿಗೂ ಕಿರುಕುಳ?

ಇದೇ ಆರೋಪಿಯು ವಾರದ ಹಿಂದೆ ಸಹ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಆ್ಯಕ್ಸಿಸ್ ಬ್ಯಾಂಕ್ ಎಲ್ಲಿದೆ ಎಂದು ಕೇಳಿದ್ದ. ಹೀಗಾಗಿ ಪದೇ ಪದೇ ತನ್ನನ್ನು ಹಿಂಬಾಲಿಸಿ ಅಸಭ್ಯವಾಗಿ ವರ್ತಿಸುತ್ತಿರುವ ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಆರೋಪಿ ಯಾಸೀನ್ ತಿಲಕನಗರದಲ್ಲಿ ತರಕಾರಿ ವ್ಯಾಪಾರ ಮಾಡುತ್ತಾನೆ. ಇದೇ ರೀತಿ ಆರೋಪಿಯು ಬೇರೆ ಯುವತಿಯರಿಗೂ ಕಿರುಕುಳ ನೀಡಿರುವ ಸಾಧ್ಯತೆಯಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net