ಯುವಜನರಲ್ಲಿ ತಾಳ್ಮೆ ಕ್ಷೀಣ

5
Published on

ಆರೋಗ್ಯದ ಅರಿವು ಜನಸಾಮಾನ್ಯರಿಗೆ ಅತ್ಯವಶ್ಯಕವಾಗಿದ್ದು, ಡಾ.ಎಸ್.ಪಿ.ಯೋಗಣ್ಣ ಅವರ ಈ ಎರಡೂ ಕೃತಿಗಳು ಎಲ್ಲರಿಗೂ ಹೆಚ್ಚಿನ ಉಪಯುಕ್ತವಾಗಲಿವೆ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಮಠದ ಪೀಠಾಧಿಪತಿ ಶ್ರೀ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.

ಸುಯೋಗ್ ಆಸ್ಪತ್ರೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ತಾಯಮ್ಮ ಪ್ರಕಾಶನ ಹೊರತಂದಿರುವ ಡಾ.ಎಸ್.ಪಿ.ಯೋಗಣ್ಣ ಅವರ ‘ಸ್ವಾಸ್ಥ್ಯ ಸಂಪದ’ ಮತ್ತು ‘ಲೈಂಗಿಕ ಸುಖದ ಸುತ್ತಮುತ್ತ’ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ಯುವ ಸಮುದಾಯದಲ್ಲಿ ತಾಳ್ಮೆ ಮತ್ತು ಕಾರ್ಯತತ್ಪರತೆ ಕ್ಷೀಣಿಸುತ್ತಿದ್ದು, ಅರಿವು ಮೂಡಿಸುವ ಇಂತಹ ಪುಸ್ತಕಗಳು ಹೆಚ್ಚು ಸಹಕಾರಿಯಾಗುತ್ತವೆ ಎಂದರು.

ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಮಾತನಾಡಿ, ಕನ್ನಡ ವೈದ್ಯಕೀಯ ಸಾಹಿತ್ಯ ಸೃಷ್ಟಿಗೆ ಡಾ.ಎಸ್.ಪಿ.ಯೋಗಣ್ಣನವರ ವೈದ್ಯಕೋಶ ಮಹತ್ತರ ಕೊಡುಗೆಯಾಗಲಿದೆ. ಅವರು ಇಲ್ಲಿಯವರೆವಿಗೆ ಅನೇಕ ಜನಪ್ರಿಯ ಪತ್ರಿಕೆಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಲೇಖನಗಳನ್ನು ಬರೆದಿದ್ದು, ಅವು ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಗಿವೆ ಎಂದರು.

ಬೆರಳೆಣಿಕೆಯಷ್ಟು ಇರುವ ಕರ್ನಾಟಕದ ವೈದ್ಯ ಸಾಹಿತಿಗಳಲ್ಲಿ ಡಾ.ಎಸ್.ಪಿ.ಯೋಗಣ್ಣ ಅಗ್ರಗಣ್ಯರು. ಅವರು ಬರೆದಿರುವ 30 ಸಾವಿರ ವೈದ್ಯ ತಾಂತ್ರಿಕ ಪದಗಳಿಗೆ ಕನ್ನಡ ಪದಗಳನ್ನುಳ್ಳ ವೈದ್ಯಕೀಯ ಪದಕೋಶ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಪ್ರಕಟಗೊಂಡು ಶೀಘ್ರದಲ್ಲಿ ಬಿಡುಗಡೆಯಾಗಲಿದ್ದು, ವೈದ್ಯಕೀಯ ಸಾಹಿತ್ಯ ಸೃಷ್ಟಿಗೆ ಮಹತ್ವದ ಕೊಡುಗೆಯಾಗಲಿದೆ ಎಂದರು.

ಕೃತಿಗಳನ್ನು ಕುರಿತು ಸಾಹಿತಿ ಪ್ರೊ.ಚಂದ್ರಶೇಖರ್ ಮಾತನಾಡಿದರು. ಹಿರಿಯ ಪತ್ರಕರ್ತ ಎಂ.ಎನ್.ಮೋಹನ್ ಕುಮಾರ್, ವಿಶ್ರಾಂತ ಕುಲಪತಿ ಡಾ. ಎನ್.ಎಸ್.ರಾಮೇಗೌಡ, ಸುಯೋಗ್ ಆಸ್ಪತ್ರೆ ಟ್ರಸ್ಟಿ ಸುಧಾ ಯೋಗಣ್ಣ, ವ್ಯವಸ್ಥಾಪಕ ನಿರ್ದೇಶಕ ಸುಯೋಗ್ ಯೋಗಣ್ಣ, ವೈದ್ಯಕೀಯ ನಿರ್ದೇಶಕ ಡಾ.ರಾಜೇಂದ್ರ ಪ್ರಸಾದ್, ನಿರ್ದೇಶಕಿ ಡಾ.ಸೀಮಾ ಯೋಗಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net