ಯುವಜನತೆ ಮಾದಕ ವಸ್ತುಗಳಿಂದ ದೂರವಿರಿ

ಜನಜಾಗೃತಿ ಕಾರ್ಯಕ್ರಮ
ಕೆ.ಆರ್.ನಗರ ತಾಲೂಕಿನ ಹೊಸ ಅಗ್ರಹಾರ ಗ್ರಾಮ ಪಂಚಾಯಿತಿ ಆವರಣದಲ್ಲಿ ಅಬಕಾರಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಎ.ರವಿಶಂಕರ್ ಮಾತನಾಡಿದರು. ಕೆ.ಟಿ.ವಿಜಯಕುಮಾರ್, ಎಸ್.ಎಂ.ಶೈಲಜಾ, ನಾಗಲಿಂಗಸ್ವಾಮಿ, ವೈ.ಎಸ್.ಲೋಕೇಶ್ ಇದ್ದರು.
Published on

ಕೆ.ಆರ್.ನಗರ: ಯುವಜನರು ಹಾಗೂ ವಿದ್ಯಾರ್ಥಿಗಳು ಕ್ಷಣಿಕ ಸುಖಕ್ಕಾಗಿ ಮಾದಕ ವಸ್ತುಗಳನ್ನು ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುವ ಜತೆಗೆ ಸಮಾಜದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಮೈಸೂರಿನ ಅಬಕಾರಿ ಉಪ ಆಯುಕ್ತ ಎ.ರವಿಶಂಕರ್ ತಿಳಿಸಿದರು.

ತಾಲೂಕಿನ ಹೊಸ ಅಗ್ರಹಾರ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಅಬಕಾರಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುವ ಜನತೆ ಯಾವುದೇ ಕಾರಣಕ್ಕೂ ಮಾದಕ ವಸ್ತುಗಳ ಬಲೆಗೆ ಬೀಳಬಾರದು. ಮಾದಕ ವಸ್ತುಗಳ ಚಟ ಒಮ್ಮೆ ಅಂಟಿಕೊಂಡರೆ ಬಿಡುವುದು ಕಷ್ಟ. ನಿರಂತರ ಸೇವನೆಯಿಂದ ಅನೇಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ ಎಂದ ಅವರು, ಮಾದಕ ಸೇವನೆಗಳಿಂದ ಶರೀರ ಬಲಹೀನಗೊಳ್ಳುತ್ತದೆ. ವ್ಯಕ್ತಿಯ ಮೇಲೆ ಭಾವನಾತ್ಮಕ, ದೈಹಿಕ ಮತ್ತು ಮಾನಸಿಕವಾಗಿ ಪ್ರಭಾವ ಬೀರುತ್ತದೆ. ಆದ್ದರಿಂದ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಮಾದಕ ವಸ್ತುಗಳ ಬಳಕೆ ಇಂದು ಗಂಭೀರ ಸಮಸ್ಯೆಯಾಗಿದೆ. ವಿಶ್ವದ ಅಂಕಿ ಅಂಶಗಳ ಪ್ರಕಾರ 15 ರಿಂದ 25 ವರ್ಷ ವಯಸ್ಸಿನ ಯುವಕರು ಶೇ.35 ರಿಂದ 40 ಮದ್ಯ ಮತ್ತು ಮಾದಕ ವಸ್ತುಗಳ ದಾಸರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಅಬಕಾರಿ ಅಧೀಕ್ಷಕ ಕೆ.ಟಿ.ವಿಜಯಕುಮಾರ್ ಮಾತನಾಡಿ, ಕೇರಳ ರಾಜ್ಯದಿಂದ ಬಂದು ನಿಮ್ಮ ಜಮೀನಿನಲ್ಲಿ ಬೆಳೆ ಬೆಳೆಯುತ್ತೇವೆ ಎಂದು ಹಣದಾಸೆ ತೋರಿಸಿ ಗಾಂಜಾ ಬೆಳೆಯುತ್ತಾರೆ. ಮುನ್ನೆಚ್ಚರಿಕೆಯಾಗಿ ಜಮೀನುಗಳಲ್ಲಿ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.

ಅಬಕಾರಿ ನಿರೀಕ್ಷಕರಾದ ಎಸ್.ಎಂ.ಶೈಲಜಾ, ಹುಣಸೂರಿನ ವಲಯ ನಿರೀಕ್ಷಕ ನಾಗಲಿಂಗಸ್ವಾಮಿ, ಜಿಲ್ಲಾ ವೀಚಕ್ಷಣ ದಳದ ವೈ.ಎಸ್.ಲೋಕೇಶ್, ಉಪನಿರೀಕ್ಷಕ ಎಚ್.ಚಿ.ಶ್ರೀನಿವಾಸ್, ಅಬಕಾರಿ ಉಪನಿರೀಕ್ಷಕ ವಿಜಯ್ ಕುಮಾರ್, ಪಿಡಿಒ ಕೆ.ಎಸ್.ಭಾಸ್ಕರ್, ಸಿಬ್ಬಂದಿ ಅಜಯ್, ಕುಮಾರ್, ಶಿವಪ್ಪ ಬಾನುಸಿ, ಪುಟ್ಟಸ್ವಾಮಿಗೌಡ, ಇರ್ಫಾನ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net