

‘ವಿಜಯಾನಂದ ಟ್ರಾವೆಲ್ಸ್’ ಪ್ರಸ್ತುತಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಮೂರುದಿನಗಳ ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್‌ಕ್ಲೇವ್ ಭಾನುವಾರ ಸಮಾಪ್ತಿಗೊಂಡಿತು.
ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಮಾಧ್ಯಮ ಸಹಯೋಗದೊಂದಿಗೆ ಮೂರು ದಿನಗಳ ಕಾಲ ಉದ್ಯಮಿಗಳನ್ನು, ವೃತ್ತಿಪರರನ್ನು ಒಂದೇ ವೇದಿಕೆಗೆ ತರುವ ಮತ್ತು ಆರ್ಥಿಕ, ಕೈಗಾರಿಕೆ, ವ್ಯಾಪಾರ ಚಟುವಟಿಕೆಗಳನ್ನು ಉತ್ತಮಗೊಳಿಸುವ ಕೆಲಸ ಮಾಡಿದ ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್‌ಕ್ಲೇವ್‌ಗೆ ನಿರೀಕ್ಷೆಗೂ ಮೀರಿದ ಯಶಸ್ವಿಗಾಗಿದ್ದು, 112 ಕೋಟಿ ರೂ. ವ್ಯಾಪಾರ ನಡೆದಿದೆ. 130 ಕೋಟಿ ರೂ. ಲೀಡ್ಸ್ ದೊರೆತಿದೆ.
ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ 15ಕ್ಕೂ ಹೆಚ್ಚು ಗೋಷ್ಠಿಗಳು ಯುವಕರಲ್ಲಿ ಉದ್ಯಮದ ಕಿಚ್ಚು ಹತ್ತಿಸುವ ಜತೆಗೆ ನವ ಉದ್ಯಮಗಳ ಬಗ್ಗೆ ಸಮಗ್ರ ಮಾಹಿತಿಯ ಬೆಳಕು ಚೆಲ್ಲಿತು. ಕಾನ್‌ಕ್ಲೇವ್‌ನಲ್ಲಿನ ಮಳಿಗೆಗಳು ಸಾರ್ವಜನಿಕರಿಗೆ ಸಕಲ ಮಾಹಿತಿ ನೀಡುವ ಜತೆಗೆ ಮೈಸೂರಿನ ಆರ್ಥಿಕತೆ ವೃದ್ಧಿಗೂ ಕೊಡುಗೆ ನೀಡಿತು. ಮುಖ್ಯವಾಗಿ ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆ, ರಿಯಲ್ ಎಸ್ಟೇಟ್, ಸ್ಟಾರ್ಟ್‌ಅಪ್‌ಗಳತ್ತ ಯುವಕರು ಮುಖ ಮಾಡುವಂತೆ ಪ್ರೇರೇಪಿಸುವಲ್ಲಿ ಯಶಸ್ವಿಯಾಯಿತು.
ಮೂರು ದಿನಗಳ ಕಾಲ ಲಕ್ಷಕ್ಕೂ ಹೆಚ್ಚು ಜನ ಕಾನ್‌ಕ್ಲೇವ್‌ನಲ್ಲಿ ಭಾಗಿಯಾಗಿ ಇಲ್ಲಿನ ನವ ಉದ್ಯಮಗಳ ಬಗ್ಗೆ ನಡೆದ ವಿಚಾರಗೋಷ್ಠಿಯಲ್ಲಿ ಜ್ಞಾನ ಪಡೆದರು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮಿಸಿದರು, ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿ ಸಂಗ್ರಹಿಸಿದರು.