ಯುವ ಮನಸುಗಳಲ್ಲಿ ಸ್ವಾಭಿಮಾನದ ಕಿಚ್ಚು ಮೂಡಿಸಿ

26 MDG 2P1 koregav
ಮೂಡಿಗೆರೆ ಭೀಮ ಕೋರೆಗಾಂವ್ ಜಾಥಕ್ಕೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಚಾಲನೆ ನೀಡಿದರು. ಹೊಸಕೆರೆ ರಮೇಶ್, ಕೆ.ಎಂ.ಸಿದ್ದೇಶ್, ಹೆಸಗಲ್ ಗಿರೀಶ್, ಯು.ವಿ.ಸುರೇಂದ್ರ, ಸುಧೀರ್ ಚಕ್ರಮಣಿ, ಬಿ.ಎಂ.ಕುಮಾರ, ದೇಜಪ್ಪ, ಬಕ್ಕಿ ಮಂಜು, ರತನ್ ಊರುಬಗೆ ಇತರರಿದ್ದರು.
Published on

ಮೂಡಿಗೆರೆ: ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂದು ಡಾ. ಬಿ.ಆರ್.ಅಂಬೇಡ್ಕರ್ ನುಡಿದಂತೆ ಇಂದಿನ ಸ್ಥಿತಿಗತಿಗಳಿಗೆ ಇತಿಹಾಸದ ಕುರುಹುಗಳಿವೆ. ಅದನ್ನು ಮರೆತವರು ಬಹುದೊಡ್ಡ ಬೆಲೆ ತೆರಬೇಕಾಗುತ್ತದೆ. ನಮ್ಮ ಹಿರಿಯರ ತ್ಯಾಗ, ಬಲಿದಾನ ಶೌರ್ಯದ ಇತಿಹಾಸವೆ ಭೀಮ ಕೋರೆಗಾಂವ್ ಯುದ್ಧ. ಅಂತಹ ಶೌರ್ಯದ ದಿನವನ್ನು ನೆನಪು ಮಾಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.

ಜ.3ರಂದು ಪಟ್ಟಣದಲ್ಲಿ ನಡೆಯಲಿರುವ ಭೀಮ ಕೋರೆಗಾಂವ್ ಕಾರ್ಯಕ್ರಮದ ಪ್ರಚಾರ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹರ್ ರೆಜಿಮೆಂಟ್ ಎಂಬ ಸೇನಾ ತುಕಡಿ ಸ್ಥಾಪಿಸಿಕೊಂಡು 1817 ಡಿ.31ರಂದು ಯುದ್ಧ ಪ್ರಾರಂಭಿಸಿ ಗೆದ್ದ ಆ ದಿನವನ್ನು ಮಹರ್ ಸೈನಿಕರು ಭೀಮ ನದಿಯಲ್ಲಿ ಮಿಂದು ಜೈ ಭೀಮ್ ಎಂಬ ಘೋಷಣೆ ಕೂಗಿದ್ದರು. ಇಂತಹ ಐತಿಹಾಸಿಕ ದಿನವನ್ನು ದೇಶದ ಪ್ರಜ್ಞಾವಂತರಾದ ಪ್ರತಿಯೊಬ್ಬರೂ ಪ್ರಚಾರ ಮಾಡಬೇಕು. ಯುವ ಮನಸುಗಳಲ್ಲಿ ಸ್ವಾಭಿಮಾನದ ಕಿಚ್ಚನ್ನು ಧೈರ್ಯದಿಂದ ತುಂಬಬೇಕಾಗಿದೆ ಎಂದು ತಿಳಿಸಿದರು.

ಪಪಂ ಉಪಾಧ್ಯಕ್ಷ ಹೊಸಕೆರೆ ರಮೇಶ್ ಮಾತನಾಡಿ, ಯುದ್ಧ ಕೌಶಲದಲ್ಲಿ ಪ್ರವೀಣರಾಗಿದ್ದ ಮಹರ್ ಸಮುದಾಯ ರಾಜ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರೊಂದಿಗೆ ಯುದ್ಧ ಮಾಡಿ ಜಯಗಳಿಸುವ ಹಂಬಲ ಹೊಂದಿದ್ದರು. ಅದರಂತೆ ಮಹರ್ ಜನಾಂಗದ ಮುಖ್ಯಸ್ಥ ಸಿದ್ದನಾಕ ಮರಾಠ 2ನೇ ಬಾಜಿರಾಯನ ಬಳಿ ಹೋಗಿ ಬ್ರಿಟಿಷ್ ಕಂಪನಿ ವಿರುದ್ಧ ನಾವು ಯುದ್ಧ ಮಾಡಲು ಸಿದ್ಧ್ದರಿದ್ದು ಗೆದ್ದೇ ಗೆಲ್ಲುತ್ತೇವೆ. ಆದರೆ ನಮ್ಮನ್ನು ಈ ರಾಜ್ಯದಲ್ಲಿ ಸಮನಾಗಿ ಕಾಣಬೇಕು ಎಂದು ಮನವಿ ಮಾಡಿಕೊಂಡನು. ಆದರೆ ಪೇಶ್ವೆಯು ಸಿದ್ದನಾಕ ಮರಾಠನ ಬೇಡಿಕೆ ತಿರಸ್ಕರಿಸಿ ಅವಮಾನಿಸಿ ಮೊದಲು ಈತನನ್ನು ಹೊರಗೆ ಕಳುಹಿಸಿ ಎಂದು ನಿಂದಿಸಿ ಸಿದ್ದನಾಕ ನಿಂತಿದ್ದ ಜಾಗವನ್ನು ಗೋಮೂತ್ರದಿಂದ ಶುದ್ಧೀಕರಿಸಿದನು. ಇದರಿಂದ ನೊಂದ ಮಹರ್ ಸೈನಿಕರು ಬಾಜಿರಾಯನ ವಿರುದ್ಧ ಯುದ್ಧಕ್ಕೆ ಸನ್ನದ್ಧರಾದರು. ಆ ಯುದ್ಧದ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮುಖಂಡರಾದ ಹೆಸಗಲ್ ಗಿರೀಶ್, ಯು.ವಿ.ಸುರೇಂದ್ರ, ಸುಧೀರ್ ಚಕ್ರಮಣಿ, ಬಿ.ಎಂ.ಕುಮಾರ್ ಬಕ್ಕಿ, ದೇಜಪ್ಪ, ರತನ್ ಊರುಬಗೆ, ಕೋಮರಾಜ್, ಯು.ಬಿ.ನಾಗೇಶ್, ಅಭಿಜಿತ್, ದೇವರಾಜ್, ಸಂದೀಪ್, ಪ್ರಕಾಶ್, ಲಕ್ಷ್ಮಣ, ಚಂದ್ರ ಸಾಲ್ಮರ, ಅರುಣ ಗಣೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net