ಯುವ ಜನಾಂಗ ಕನ್ನಡವನ್ನು ಪ್ರೀತಿಸಲಿ

Kannada Rajyotsava
Published on

ಕನ್ನಡ ಅತ್ಯಂತ ಸುಂದರ, ಸಂಪದ್ಭರಿತ ಭಾಷೆಯಾಗಿದ್ದು, ಯುವ ಜನಾಂಗ ಕನ್ನಡವನ್ನು ಪ್ರೀತಿಸಿ, ಗೌರವಿಸಬೇಕಾಗಿದೆ. ಕನ್ನಡದ ಉಳಿವಿಗಾಗಿ ಎಲ್ಲರು ಶ್ರಮಿಸಬೇಕಿದೆ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಕೆ.ಅನಂತರಾಮು ತಿಳಿಸಿದರು.

ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರ್ನಾಟಕದ ಪರಂಪರೆ ಅತ್ಯಂತ ಪುರಾತನವಾದದ್ದು. ಮಹಾಭಾರತದ ಯುದ್ಧಗಳಲ್ಲಿ ಇದ್ದ ಒಂದು ಸೈನ್ಯದ ತುಕಡಿ ಕರ್ನಾಟಕ ರಾಜ್ಯದ್ದಾಗಿತ್ತು. ಹಲವು ರಾಜಮನೆತನಗಳು ಕರ್ನಾಟಕ ಕಟ್ಟುವಲ್ಲಿ ಶ್ರಮಿಸಿರುವುದನ್ನು ನಾವೆಲ್ಲ ಇಂದು ಸ್ಮರಿಸಬೇಕು. ಕರ್ನಾಟಕ ಎಂದರೆ ವಿವಿಧ ಕಲೆಗಳ ಬೀಡು ಮತ್ತು ಆಶ್ರಯ ತಾಣ. ಶಾಸ್ತ್ರೀಯ ಸಂಗೀತಕ್ಕೆ ಮೂಲ ನಮ್ಮ ಕರ್ನಾಟಕ ಸಂಗೀತ. ಕರ್ನಾಟಕ ಸಂಗೀತಕ್ಕೆ ಮೂಲಪುರುಷ ಪುರಂದರದಾಸರು. ಸಂಗೀತ ಕ್ಷೇತ್ರದಲ್ಲಿ ಕನ್ನಡಿಗರ ಕೊಡುಗೆ ಅಪಾರ ಎಂದ ಅವರು, ಕನ್ನಡ ವಾದ್ಯಗಳು, ನೃತ್ಯಗಳು, ಶಿಲ್ಪಕಲೆಗಳು, ಚಿತ್ರಕಲೆಗಳ ಬಗ್ಗೆ ವಿವರಿಸಿದರು.

ಎಲ್ಲ ರಾಜ್ಯಗಳಿಗೂ ಮಾದರಿಯಾಗಿರುವ ರಾಜ್ಯ ಎಂಬ ಹೆಮ್ಮೆ ನಮ್ಮದು. ಕನ್ನಡಿಗರು ಕಲೆಗಳ ಸಾಮ್ರಾಟರಾಗಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟದ ಹಾಗೆ ಸರ್ವಜನಾಂಗದ ಭಾಷೆಗಳನ್ನೊಳಗೊಂಡ ಶಾಂತಿಯ ನಾಡು ನಮ್ಮ ಕರ್ನಾಟಕ. ನಮ್ಮೊಳಗಿನ ಪ್ರತಿಭೆಗಳನ್ನು ನಾವೆಲ್ಲಾ ಬೆಳೆಸಿಕೊಳ್ಳುತ್ತೇವೆ ಎಂದು ಕನ್ನಡಿಗರು ಇಂದು ಸಂಕಲ್ಪ ಮಾಡಿಕೊಳ್ಳೋಣ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಮಹದೇವಸ್ವಾಮಿ.ಎಂ ಮಾತನಾಡಿ, ನಮ್ಮ ಸಂಸ್ಕೃತಿ ನಮ್ಮ ಕನ್ನಡ ನುಡಿಯಲ್ಲಿಯೆ ಅಡಗಿದೆ. ನಮ್ಮ ಭಾಷೆ ಅತ್ಯಂತ ಪುರಾತನ, ಸಂಪದ್ಭರಿತವಾಗಿದ್ದು, ಅದನ್ನು ಉಳಿಸಿ ಬೆಳೆಸಬೇಕಾಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರು ಮಾತೃ ಭಾಷೆಯಾದ ಕನ್ನಡ ಮರೆಯದಿರಿ, ಕನ್ನಡವನ್ನು ಉಳಿಸಿ ಬೆಳೆಸಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದಿ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ, ಮ್ಯಾನೇಜಿಂಗ್ ಟ್ರಸ್ಟಿ ಡಾ.ಎಂ.ಪುಟ್ಟಸ್ವಾಮಿ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ಟಿ.ರಮೇಶ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net