ಯುವ ಜನತೆ ಮತದಾನದ ಮಹತ್ವ ತಿಳಿಯಬೇಕು

HUN-NOV-30-1(MAHILA COLLEGE PROGRAMME)
Published on

ಹುಣಸೂರು: ಮತದಾನದ ದಿನ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಜವಾಬ್ದಾರಿಯುತವಾಗಿ ಚಲಾಯಿಸುವ ಅಗತ್ಯತೆ ಇದ್ದು, ಯುವ ಮತದಾರರು ಈ ಕುರಿತು ಚಿಂತಿಸ ಬೇಕು ಎಂದು ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಸಲಹೆ ನೀಡಿದರು. ನಗರದ ಸರ್ಕಾರಿ ಮಹಿಳಾ ಕಾಲೇಜಿನ ಚುನಾವಣಾ ಸಾಕ್ಷರತಾ ಕ್ಲಬ್ ಮತ್ತು ತಾಲೂಕು ಚುನಾವಣಾ ವಿಭಾಗದ ವತಿಯಿಂದ ಬುಧವಾರ ಆಯೋಜಿಸಿದ್ದ ಪ್ರಜಾ ಪ್ರಭುತ್ವಕ್ಕಾಗಿ ಒಂದು ಗಂಟೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಚುನಾವಣೆ ದಿನ ನಮ್ಮ ಒಳಿತಿಗಾಗಿ ಮತ ಚಲಾಯಿಸುವತ್ತ ಗಮನಿಸಬೇಕು. ಸರ್ಕಾರದಿಂದ ಎಲ್ಲ ಸವಲತ್ತುಗಳನ್ನು ಕೇಳುವ ನಾವು ಉತ್ತಮ ಸರ್ಕಾರದ ಆಯ್ಕೆಯು ಕೂಡ ನಮ್ಮದೇ ಜವಾಬ್ದಾರಿ ಎನ್ನುವುದನ್ನು ಮರೆತು ಬಿಡುತ್ತೇವೆ. ದೇಶದ ಭವಿಷ್ಯದ ಪ್ರಜೆಗಳಾದ ಯುವ ಮತದಾರರು ಕಡ್ಡಾಯವಾಗಿ ಮತದಾರರ ಗುರುತಿನ ಚೀಟಿ ಪಡೆದು ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ತಮ್ಮ ಹಕ್ಕನ್ನು ಚಲಾಯಿಸುವ ಕರ್ತವ್ಯವನ್ನೂ ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.


ಚುನಾವಣಾ ವಿಭಾಗದ ಶಿರಸ್ತೇದಾರ್ ಕಿರಣ್‌ಕುಮಾರ್ ಮಾತನಾಡಿ, ಈ ಹಿಂದೆ ವಾರ್ಷಿಕ ಒಮ್ಮೆ ಮಾತ್ರ ಮತದಾರರ ಗುರುತಿನ ಚೀಟಿಗಾಗಿ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಇದೀಗ ವರ್ಷದಲ್ಲಿ ನಾಲ್ಕು ಬಾರಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ವೋಟರ್ಸ್‌ ಹೆಲ್ಪ್‌ಲೈನ್ ಆ್ಯಪ್ ಕೂಡ ಆಯೋಗ ಬಿಡುಗಡೆಗೊಳಿಸಿದ್ದು, ದಾಖಲೆ ಗಳು ಸಮರ್ಪಕವಾಗಿದ್ದಲ್ಲಿ 90 ದಿನಗಳೊ ಳಗೆ ನಿಮ್ಮ ಮನೆಬಾಗಿಲಿಗೆ ಗುರುತಿನ ಚೀಟಿ ತಲುಪಲಿದೆ ಎಂದು ಮಾಹಿತಿ ನೀಡಿದರು.


ಕಾಲೇಜಿನ ಚುನಾವಣಾ ಸಾಕ್ಷರತಾ ಕ್ಲಬ್ ಸಂಯೋಜನಾಧಿಕಾರಿ ಪುಟ್ಟಶೆಟ್ಟಿ ಮಾತನಾಡಿ, ಕಾಲೇಜಿನಲ್ಲಿ ಈಗಾಗಲೇ 600 ವಿದ್ಯಾರ್ಥಿನಿಯರು ಆ್ಯಪ್ ಮೂಲಕ ಹೆಸರು ನೋಂದಾಯಿಸಿಕೊಂಡಿದ್ದು, 300 ವಿದ್ಯಾರ್ಥಿನಿಯರ ನೋಂದಣಿ ಕಾರ್ಯ ಬಾಕಿ ಇದೆ. ಏ.1, 2023ಕ್ಕೆ 17 ವರ್ಷ ತುಂಬುವ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಲ್ಲಿ 2023ರ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ವಿದ್ಯಾರ್ಥಿನಿಯರು ಆ್ಯಪ್ ಮೂಲಕ ಮತದಾರರ ಗುರುತಿನಿ ಚೀಟಿಗೆ ಹೆಸರು ನೋಂದಾಯಿಸಿಕೊಂಡರು. ಬಳಿಕ ವಿದ್ಯಾರ್ಥಿನಿಯರ ಪಟ್ಟಿಯನ್ನು ತಹಸೀಲ್ದಾರ ರಿಗೆ ನೀಡಲಾಯಿತು. ಪ್ರಾಂಶುಪಾಲ ಜ್ಞಾನಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಬಿ.ಎಂ.ನಾಗರಾಜ್, ದೀಪುಕುಮಾರ್, ಡಾ.ಕೆ.ಎಸ್. ಭಾಸ್ಕರ್, ಡಾ.ನಂಜುಂಡಸ್ವಾಮಿ, ರಜಿಯಾ ಸುಲ್ತಾನ್, ಶ್ರೀನಿವಾಸ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net