ಯುಪಿಯ ಝಾನ್ಸಿ ಬಳಿ ನಾಗಸಾಧು ಶವ ಪತ್ತೆ

Rajanath Maharaj
Published on

ಚಿತ್ರದುರ್ಗ: ಪ್ರಯಾಗ್ ರಾಜ್ ನಲ್ಲಿ ಜರುಗುತ್ತಿರುವ ಮಹಾ ಕುಂಭಮೇಳಕ್ಕೆ ತೆರಳಿದ್ದ ಕೋಟೆನಗರಿಯ ನಾಗಸಾಧು ರಾಜನಾಥ್ ಮಹಾರಾಜ್ (49) ಉತ್ತರ ಪ್ರದೇಶದ ಝಾನ್ಸಿ ರೈಲ್ವೆ ನಿಲ್ದಾಣ ಸಮೀಪ ಶುಕ್ರವಾರ ಶವವಾಗಿ ಪತ್ತೆ ಆಗಿದ್ದಾರೆ.

ಚಿತ್ರದುರ್ಗದ ಬಂಜಾರ ಸಮುದಾಯದ ಸಂತ ಸೇವಾಲಾಲ್ ಗುರುಪೀಠದೊಂದಿಗೆ ಆರೇಳು ವರ್ಷದಿಂದ ನಿಕಟ ಸಂಪರ್ಕ ಹೊಂದಿದ್ದ ರಾಜನಾಥ್ ಮಹಾರಾಜ್ ಅವರು ಕಳೆದ 14 ದಿನಗಳ ಹಿಂದಷ್ಟೇ ಪ್ರಯಾಗ್ ರಾಜ್ ನ ಮಹಾಕುಂಭ ಮೇಳಕ್ಕೆ ತೆರಳಿದ್ದರು.

ದೇವರ ದರ್ಶನ ಪಡೆದು, ಅಮೃತ ಸ್ನಾನ ಮಾಡಿರುವುದಾಗಿ ಸರ್ದಾರ್ ಸೇವಾಲಾಲ್ ಶ್ರೀಗೆ ಮೊಬೈಲ್ ಕರೆ ಮಾಡಿ ತಿಳಿಸಿದ್ದರು. ಶವವಾಗಿ ಪತ್ತೆಯಾಗಿರುವ ಸಂಗತಿ ಸ್ವಾಮೀಜಿ ಅವರನ್ನು ದಿಗ್ಭಾಂತರನ್ನಾಗಿಸಿದೆ.

ಚಿತ್ರದುರ್ಗದ ಬಂಜಾರ ಗುರುಪೀಠದ ಆವರಣದಲ್ಲಿ ಗುರು ಪರಂಪರೆಯಂತೆ ಅಂತ್ಯ ಸಂಸ್ಕಾರ ನಡೆಸಲು ಸಿದ್ಧರಿದ್ದೇವೆ. ಪಾರ್ಥಿವ ಶರೀರವನ್ನು ಗುರುಪೀಠಕ್ಕೆ ತಲುಪಿಸಿ ಎಂದು ಉತ್ತರ ಪ್ರದೇಶ ಮತ್ತು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇತ್ತೀಚೆಗೆ ಜರುಗಿದ ಮಹಾ ಕುಂಭಮೇಳದ ಕಾಲ್ತುಳಿತದಲ್ಲಿ ರಾಜನಾಥ್ ಅವರು ಮೃತಪಟ್ಟಿದ್ದಾರೆ ಎಂಬುದಾಗಿ ಹಬ್ಬಿರುವ ವದಂತಿ ಸತ್ಯಕ್ಕೆ ದೂರವಾದ ಸಂಗತಿ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ.

ಪ್ರಯಾಗ್ ರಾಜ್ನಿಂದ 500 ಕಿ.ಮೀ ದೂರದಲ್ಲಿರುವ ಝಾನ್ಸಿಯ ರೈಲ್ವೆ ನಿಲ್ದಾಣದ ಸಮೀಪದಲ್ಲಿ ಅಪರಿಚಿತ ಶವವಾಗಿ ಪತ್ತೆಯಾಗಿದ್ದು, ಈ ವಿಷಯವನ್ನು ಅಲ್ಲಿನ ರೈಲ್ವೆ ನಿಲ್ದಾಣದ ನೋಟಿಸ್ ಬೋರ್ಡ್ ನಲ್ಲೂ ಪ್ರಕಟಿಸಲಾಗಿದೆ.

ಈ ಕುರಿತು ರೈಲ್ವೆ ಅಧಿಕಾರಿಗಳೊಂದಿಗೆ ಸಮನ್ವಯ ಮಾಡಿಕೊಳ್ಳಲಾಗಿದೆ. ಹೀಗಾಗಿ ಮೃತರ ಶವವನ್ನು ಅಲ್ಲಿನ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಯಾರಾದರೂ ವಾರಸುದಾರರಿದ್ದಲ್ಲಿ, ಶವ ಗುರುತಿಸಿ, ಪತ್ತೆ ಮಾಡಿಕೊಳ್ಳಬಹುದಾಗಿದೆ.

ಕಾಲ್ತುಳಿತದಲ್ಲಿ ಮೃತರಾದ ಪ್ರಕರಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಡಿಸಿ ಖಚಿತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net