

ಬನ್ನೂರು: ಸಮೀಪದ ಯಾಚೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 2022-23ನೇ ಸಾಲಿನಲ್ಲಿ 11ಲಕ್ಷ ರೂ. ಲಾಭ ಬಂದಿದೆ ಎಂದು ಸಂಘದ ಅಧ್ಯಕ್ಷ ಮಲ್ಲೇಶ್ ತಿಳಿಸಿದರು.
ಅವರು ಯಾಚೇನಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.
ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ಲಾಭದಲ್ಲಿ ಸ್ವಲ್ಪ ಕಡಿಮೆಯಾಗಿದ್ದು, ಇದಕ್ಕೆ ಕೆಲವರ ಅಸಹಕಾರ ಪ್ರಮುಖ ಕಾರಣವಾಗಿದೆ. ಕೆಲವರು ಹಾಲು ಹಾಕದೆ ಇರುವುದರಿಂದ 15 ಲಕ್ಷ ರೂ. ನಿರೀಕ್ಷಿತ ಲಾಭ ತಲುಪಲು ಆಗಲಿಲ್ಲ ಎಂದರು.
ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್. ಶಂಕರೇಗೌಡ ಮಾತನಾಡಿ, ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಖ್ಯೆ ಹೆಚ್ಚಾಗಿದ್ದು, ಗ್ರಾಮದಲ್ಲಿ ಪಶು ಆಸ್ಪತ್ರೆ ತೆರೆಯುವ ಹಂಬಲದೊಂದಿಗೆ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಮುಂದಿನ ದಿನಗಳಲ್ಲಿ ಪಶು ಆಸ್ಪತ್ರೆ ಆರಂಭಿಸುವುದಾಗಿ ತಿಳಿಸಿದರು.
ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಹಾಲು ಉತ್ಪಾದಕ ಸಹಕಾರ ಸಂಘಗಳು ಗ್ರಾಮದ ಎರಡು ಕಣ್ಣುಗಳಾಗಿದ್ದು, ಅವುಗಳ ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ ಎಂದು ತಿಳಿಸಿದರು.
ವಿಸ್ತರಣಾಧಿಕಾರಿ ದಿವ್ಯಶ್ರೀ 2022-23ನೇ ಸಾಲಿನ ಖರ್ಚು, ಆದಾಯವನ್ನು ತಿಳಿಸಿದರು. 2023-24ನೇ ಸಾಲಿನ ಅಂದಾಜು ಬಜೆಟ್ ಅನ್ನು ಸಭೆಗೆ ಮಂಡಿಸಿದರು. ಇದೇ ಸಂದರ್ಭದಲ್ಲಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿರುವ ರಾಜೇಂದ್ರಕುಮಾರ್ ಹಾಗೂ ಕೆಂಪೇಗೌಡ ಅವರನ್ನು ಸನ್ಮಾನಿಸಲಾಯಿತು.
ಯಜಮಾನರಾದ ವೈ.ಎಚ್. ಹನುಮಂತೇಗೌಡ, ವೈ.ಎಂ.ಚಂದ್ರು, ಕೆಂಪೇಗೌಡ, ರಾಜೇಂದ್ರ ಕುಮಾರ್, ದೊಡ್ಡಸಿದ್ದೇಗೌಡ, ವೈ.ಎಸ್.ಶಿವಕುಮಾರ್, ವೈ.ಜೆ.ಪುಟ್ಟರಾಜು, ಬಸವರಾಜು, ವೈ.ಕೆ. ಉಮೇಶ್, ವೈ.ಜೆ.ಪ್ರಕಾಶ್, ನಾಗಮ್ಮ ನಾಗಯ್ಯ, ನಾಗಣ್ಣ, ಮಹೇಶ್, ಮಹದೇವ್, ವಿಸ್ತರಣಾ ಅಧಿಕಾರಿ ದಿವ್ಯಶ್ರೀ, ಕಾರ್ಯದರ್ಶಿ ರಾಹುಲ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಇದ್ದರು.