

ಬನ್ನೂರು: ವಿವಿಧ ರಾಜ್ಯದ ಡಿಸಿಸಿ ಬ್ಯಾಂಕ್‌ಗಳ ಆಯ್ದ ಸದಸ್ಯರು ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಹಾಲು ಉತ್ಪಾದನ ಸಹಕಾರ ಸಂಘಗಳಿಗೆ ಭೇಟಿ ನೀಡಿ ಸಂಘದ ಅಭಿವೃದ್ಧಿಯ ಬಗ್ಗೆ ಮಾಹಿತಿ ಪಡೆದರು.
ಮಂಗಳವಾರ ಯಾಚೇನಹಳ್ಳಿ ಗ್ರಾಮದ ಪ್ರಾಥಮಿಕ ಸಹಕಾರ ಸಂಘಕ್ಕೆ ಭೇಟಿ ನೀಡಿದ ವಿವಿಧ ರಾಜ್ಯಗಳ ಡಿಸಿಸಿ ಬ್ಯಾಂಕ್‌ಗಳ ಸದಸ್ಯರನ್ನು, ಸಂಘದ ಅಧ್ಯಕ್ಷ ವೈ.ಎನ್. ಶಂಕರೇಗೌಡ ಅವರನ್ನು ಬರಮಾಡಿಕೊಂಡರು. ನಂತರ ಸಹಕಾರ ಸಂಘದಲ್ಲಿ ಕೈಗೊಂಡ ವಿವಿಧ ಕಾರ್ಯಕ್ರಮದ ಬಗ್ಗೆ ಮಾಹಿತಿ ಒದಗಿಸಿದರು.
ಯಾಚೇನಹಳ್ಳಿ ಗ್ರಾಮದಲ್ಲಿ 2009ರಲ್ಲಿ ಆರಂಭವಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಾರಂಭದ ಆದಾಯ 50 ಸಾವಿರ ರೂ.ಗೆ ಸೀಮಿತವಾಗಿತ್ತು. ಪ್ರಸ್ತುತ ಸಂಘ ಕೋಟಿ ರೂ. ವಹಿವಾಟು ಕಾಣುವಂತಾಗಿದೆ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರಸಗೊಬ್ಬರ ಮಾರಾಟ, ನಂದಿನಿ ಮಳಿಗೆ, ಸೌರ ವಿದ್ಯುತ್ ಮಾರಾಟ, ಅಂತ್ಯಸಂಸ್ಕಾರದ ವಾಹನ , ಕುಡಿಯುವ ಶುದ್ಧ ನೀರಿನ ಪೂರೈಕೆ, ಪಶು ಆಹಾರಗಳ ಮಾರಾಟ, ರಿಯಾಯಿತಿ ದರದಲ್ಲಿ ದಿನಬಳಕೆಯ ವಸ್ತುಗಳ ಮಾರಾಟ ಮಾಡುವ ಕೇಂದ್ರ, ಜನೌಷಧ ಕೇಂದ್ರ ಹೀಗೆ ಹಂತ ಹಂತವಾಗಿ ವಿವಿಧ ಮಳಿಗೆಗಳನ್ನು ಆರಂಭಿಸಿ ಇದೀಗ ಪ್ರತಿಯೊಂದರಿಂದಲೂ ಉತ್ತಮ ಆದಾಯ ದೊರೆಯುತ್ತಿದೆ ಎಂದು ವಿವರಿಸಿದರು.
ತಾಲೂಕಿನಲ್ಲಿ ಯಾಚೇನಹಳ್ಳಿ ಗ್ರಾಮದಲ್ಲಿ ಹೆಚ್ಚಿನ ಜಾನುವಾರುಗಳನ್ನು ಸಾಕಲಾಗುತ್ತಿದೆ. ಇಲ್ಲಿ ನಿತ್ಯ ಹಾಲು ಹಾಕುವವರ ಸಂಖ್ಯೆ ಅಧಿಕವಾಗಿದೆ. ಹಾಲು ಸರಬರಾಜು ಮಾಡುವವರಿಗೆ ಸರ್ಕಾರದಿಂದ ದೊರಯುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, 10 ದಿನಗಳಲ್ಲಿಯೇ ಹಾಲಿನ ಹಣವನ್ನು ಅವರ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ನಬಾರ್ಡ್‌ನಿಂದ ಭೇಟಿ ನೀಡಿದ ಪ್ರಾದೇಶಿಕ ನಿರ್ದೇಶಕ ನಿಖಿಲ್‌ಕುಮಾರ್ ಅವರನ್ನು ಅಭಿನಂದಿಸಲಾಯಿತು. ವೈ.ಎಂ. ಮಲ್ಲೇಶ್, ವೈ.ಕೆ. ಬೋರೇಗೌಡ, ನಾಗೇಂದ್ರ, ಕಾರ್ಯನಿರ್ವಹಣಾ ಅಧಿಕಾರಿ ವೈ.ಕೆ. ಕ್ಯಾತೇಗೌಡ, ಡಿಸಿಸಿ ಬ್ಯಾಂಕ್‌ನ ನವನೀತ್, ರಾಜಪ್ಪ, ಅಶೋಕ್ ಸೇರಿದಂತೆ ಪ್ರಮುಖರು ಇದ್ದರು.