ಯಾಚೇನಹಳ್ಳಿ ಗ್ರಾಮದ ನಾಲೆ ಒಡೆದು ನೀರೆಲ್ಲ ಪೋಲು

16tnpnewsfile01
Published on

ತಿ.ನರಸೀಪುರ : ಮೂರು ದಿನದಿಂದ ಸುರಿದ ಧಾರಾಕಾರ ಮಳೆಯಿಂದ ತಾಲೂಕಿನ ಯಾಚೇನಹಳ್ಳಿ ಗ್ರಾಮದ ಸಮೀಪದ ಸಿಡಿಎಸ್ ನಾಲೆ ಕುಸಿತ ಕಂಡಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಬಗಾದಿ ಗೌತಮ್ ಭಾನುವಾರ ಭೇಟಿ ಸ್ಥಳ ಪರಿಶೀಲನೆ ನಡೆಸಿದರು.

ಯಾಚೇನಹಳ್ಳಿ ಗ್ರಾಮದ ಅನತಿ ದೂರದಲ್ಲಿ ನಾಲೆಯು ಒಡೆದು ಹೋಗಿದ್ದು, ಗದ್ದೆಗಳಿಗೆ ನೀರು ನುಗ್ಗಿ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ನಾಲೆಯ ದುರಸ್ತಿ ಕೆಲಸ ಪ್ರಗತಿಯಲ್ಲಿದ್ದು, ಬಿದ್ದಿರುವ ಕೋಡಿಯನ್ನು ತಡೆಯಲು ಸಾಧ್ಯವಾಗಿಲ್ಲ. ನಾಲೆ ಕೋಡಿ ದೊಡ್ಡ ಪ್ರಮಾಣದಲ್ಲಿ ಬಿದ್ದಿರುವುದರಿಂದ ನಾಲೆ ಕೇಳಬದಿಯಲ್ಲಿರುವ ಸುಮಾರು 200ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ಸಂಪೂರ್ಣ ಜಲಾವೃತವಾಗಿದೆ.

ಸ್ಥಳ ಪರಿಶೀಲಿಸಿದ ನಂತರ ಮಾತನಾಡಿದ ಜಿಲ್ಲಾಧಿಕಾರಿ, ಸ್ಥಳೀಯ ಶಾಸಕರು ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿ ಆಗಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಿದ್ದು, ನಾನು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಸಂಬಂಧಪಟ್ಟ ಎಲ್ಲ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ದುರಸ್ತಿ ಕೆಲಸ ಪ್ರಗತಿಯಲ್ಲಿದೆ. ನೆನ್ನೆಯ ಮಳೆಯಿಂದ ಯಾಚೇನೇಹಳ್ಳಿ ಮತ್ತು ಹನುಮನಾಳು ಗ್ರಾಮಗಳ ಸುಮಾರು 250 ಎಕರೆ ಬೆಳೆ ನಾಶ ಆಗಿರಬಹುದು ಎಂದು ಕೃಷಿ ಇಲಾಖೆ ಅಂದಾಜಿಸಿದೆ. ವರದಿ ಬಂದ ನಂತರ ಪರಿಹಾರ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಆದಲ್ಲದೆೆ ತಾಲೂಕಿನ ವಿವಿಧ ಭಾಗಗಳಲ್ಲಿ ಜಮಿನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿರುವ ಬಗ್ಗೆ ಮಾಹಿತಿ ನೀಡುವ ಭರವಸೆ ನೀಡಿದರು.

ಶಾಸಕ ಅಶ್ವಿನ್‌ಕುಮಾರ್ ಮಾತನಾಡಿ, ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿರುವುದರಿಂದ ನಾಲೆಗಳಲ್ಲಿ ಹೆಚ್ಚು ನೀರು ಹರಿಯುತ್ತಿದೆ. ಹಾಗಾಗಿ ನಾಲೆಗಳು ತುಂಬಿ ಹರಿಯುತ್ತಿರುವುದರಿಂದ ಅಲ್ಲಲ್ಲಿ ನಾಲೆಗಳು ದುಸ್ಥಿತಿ ತಲುಪಿವೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಜತೆ ಸಭೆ ನಡೆಸಿದ್ದು, ಆದಷ್ಟು ಬೇಗ ಸಂತ್ರಸ್ಥರಿಗೆ ಪರಿಹಾರ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಜಿ.ಪಂ. ಸಿಇಒ ಪೂರ್ಣಿಮಾ, ತಹಸೀಲ್ದಾರ್ ಸಿ.ಜಿ.ಗೀತಾ, ನೀರಾವರಿ ಇಲಾಖೆ ಎಇಇ ಶಿವಮಾಧವನ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ, ಜೆಇ ಪ್ರದೀಪ್, ಜೆಡಿಎಸ್ ಮುಖಂಡ ಬಿ.ಆರ್ . ಮಂಜುನಾಥ್, ಬನ್ನೂರು ಕುಮಾರ್ , ಗ್ರಾಪಂ ಸದಸ್ಯ ಹೋಟೆಲ್ ರಾಮಸ್ವಾಮಿ, ಬೇವಿನಹಳ್ಳಿ ಸತೀಶ್, ಅತ್ತಹಳ್ಳಿ ರವಿ, ಚೇತನಶಟ್ಟಿ, ರೈತರು ಹಾಗೂ ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net