ಮೌಲ್ಯಮಾಪನ ವಿಕೇಂದ್ರೀಕರಣಕ್ಕೆ ಒತ್ತಾಯ

PUC
Published on

ಬೆಂಗಳೂರು
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಮೌಲ್ಯಮಾಪನ ನಡೆಸಲು ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಸಿದ್ಧವಾಗಿದ್ದು, ಮೌಲ್ಯಮಾಪನ ವಿಕೇಂದ್ರೀಕರಣ ಮಾಡದಿರುವುದು ಮೌಲ್ಯಮಾಪಕರಿಗೆ ತಲೆನೋವು ತಂದಿದೆ.
ಸೆ.24ರಿಂದ ಮೌಲ್ಯಮಾಪನ ಕಾರ್ಯ ಆರಂಭವಾಗಲಿದೆ. ಪೂರಕ ಪರೀಕ್ಷೆಗೆ 2 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇದೀಗ ಈ ಎಲ್ಲ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಬೇಕಿದೆ. ಬೆಂಗಳೂರಿನ ಮೌಲ್ಯಮಾಪಕರಿಗೆ ಬೀದರ್‌ನಲ್ಲಿ ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಇಲಾಖೆ ಆದೇಶ ನೀಡಿದೆ. ಕರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬೇರೆ ಜಿಲ್ಲೆಗಳಿಗೆ ಹೋಗಿ ಮೌಲ್ಯಮಾಪನ ಮಾಡುವುದು ಕಷ್ಟವಾಗಿದೆ. ಈ ಕಾರಣಕ್ಕಾಗಿಯೇ ಮೌಲ್ಯಮಾಪನ ವಿಕೇಂದ್ರೀಕರಣ ಮಾಡುವಂತೆ ಪಿಯು ಇಲಾಖೆ ಬಳಿ ಈ ಮೊದಲೇ ಸಂಘವು ಮನವಿ ಮಾಡಲಾಗಿತ್ತು.
ಹಾಲಿ ಇರುವ ನಿರ್ದೇಶಕರು ಧೀರ್ಘ ಕಾಲದ ರಜೆಗೆ ತೆರಳಿರುವುದರಿಂದ ಸರ್ಕಾರ ಹೊಸ ನಿರ್ದೇಶಕರ ನೇಮಕ ಮಾಡಿದೆ. ಆದರೆ, ಹೊಸ ನಿರ್ದೇಶಕರು ಇನ್ನೂ ಅಧಿಕಾರವಹಿಸಿಕೊಳ್ಳದೇ ಇರುವುದರಿಂದ ನಾವು ಸೋಮವಾರ ನಿರ್ದೇಶಕರನ್ನು ಭೇಟಿ ಮಾಡಿ ಮೌಲ್ಯಮಾಪನ ವಿಕೇಂದ್ರೀಕರಣಕ್ಕೆ ಮನವಿ ಮಾಡುವುದಾಗಿ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್.ನಿಂಗೇಗೌಡ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net