

ಬೆಂಗಳೂರು
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ನಡೆಸುತ್ತಿರುವ ಡಿಪ್ಲೋಮಾ ಸೆಮಿಸ್ಟರ್ ಥಿಯರಿ ಪರೀಕ್ಷೆಗಳು ಸೆ.29ಕ್ಕೆ ಮುಕ್ತಾಯವಾಗಲಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಮೌಲ್ಯಮಾಪನ ಕಾರ್ಯ ಆರಂಭಿಸಲಿದೆ.
ಮೌಲ್ಯಮಾಪನ ಕಾರ್ಯದ ಹಿನ್ನೆಲೆಯಲ್ಲಿ ಈ ವೇಳೆ ಅನುಸರಿಸಬೇಕಾದ ಪ್ರಮಾಣಿತ ಕಾರ್ಯಚರಣಾ ವಿಧಾನ(ಎಸ್‌ಒಪಿ)ಯನ್ನು ಬಿಡುಗಡೆ ಮಾಡಿದೆ.
ಮೌಲ್ಯಮಾಪನ ಕೇಂದ್ರಗಳಲ್ಲಿ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಮತ್ತು ಆಂಬುಲೆನ್ಸ್ ವಾಹನಗಳು ತುರ್ತು ಸಂದರ್ಭಗಳಲ್ಲಿ ತತ್‌ಕ್ಷಣ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು. ಸ್ಥಳೀಯ ಆಡಳಿತ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಜಿಲ್ಲಾಡಳಿತ ಇವರುಗಳಿಗೆ ಮೌಲ್ಯಮಾಪನ ಕಾರ್ಯ ನಡೆಯುವ ಬಗ್ಗೆ ಲಿಖಿತವಾಗಿ ತಿಳಿಸಿ ಮೌಲ್ಯಮಾಪನ ಆವಧಿಯಲ್ಲಿ ನಿರಂತರ ಸಂಪರ್ಕದಲ್ಲಿದ್ದು, ಅವರುಗಳ ಮಾರ್ಗದರ್ಶನ ಮತ್ತು ಪೂರ್ಣ ಸಹಕಾರದೊಂದಿಗೆ ಮೌಲ್ಯಮಾಪನ ಕಾರ್ಯ ನಡೆಸಬೇಕು.
ಕೇಂದ್ರಕ್ಕೆ ಅಗತ್ಯವಿರುವ ಥರ್ಮಲ್ ಸ್ಕಾೃನರ್‌ಗಳು, ಮಾಸ್ಕ್, ಕೈಗವಸುಗಳು, ಲಭ್ಯವಿರುವಂತೆ ನೋಡಿಕೊಳ್ಳಬೇಕು. ಇದರ ಹೊರತಾಗಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಸಾಮಾಜಿಕ ಅಂತರ, ಸುಚಿತ್ವ ಕಾಪಾಡಿಕೊಳ್ಳಬೇಕು. ಈ ಮೌಲ್ಯಮಾಪನ ಕಾರ್ಯವು 15 ವಿಕೇಂದ್ರೀಕೃತ ಕೇಂದ್ರಗಳಲ್ಲಿ ನಡೆಯಲಿದೆ. ನೋಡಲ್ ಮೌಲ್ಯಮಾಪನ ಕೇಂದ್ರಗಳ ಅಧಿಕಾರಿಗಳು, ಶಿಬಿರಾಧಿಕಾರಿಗಳು, ಸಹಾಯಕ ಶಿಬಿರಾಧಿಕಾರಿಗಳು, ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಮತ್ತು ಮೌಲ್ಯಮಾಪಕರು ಇಲಾಖೆ ನೀಡಿರುವ ಎಸ್‌ಒಪಿಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಿದೆ.