

ದೇಶದಲ್ಲಿ ಕಾಂಗ್ರೆಸ್ಸೇತರ ಸರ್ಕಾರಗಳಲ್ಲಿ ದೀರ್ಘಕಾಲದ ಪ್ರಧಾನಿಯಾಗಿ ಆಡಳಿತ ನಡೆಸಿದ ಹೆಗ್ಗಳಿಕೆ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಅವರು ಮಹಿಳೆಯರ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.
ಪ್ರಧಾನಿ ಮೋದಿಯವರ 11ವರ್ಷ ಪೂರೈಸಿದ ಹಿನ್ನೆಲೆ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ನರೇಂದ್ರ ಮೋದಿಗೆ ಮೋದಿಯೇ ಸಾಟಿ, ಅವರಿಗೆ ಬೇರೆ ಯಾರ ಹೋಲಿಕೆಯೂ ಸಲ್ಲದು. ಭೀಮ ಸಖಿ ಯೋಜನೆ ಮೂಲಕ ಮಹಿಳೆಯರಿಗೆ ಎಐಸಿ ಇನ್ಶೂರೆನ್ಸ್ ವ್ಯವಸ್ಥೆ ಜಾರಿಗೆ ತಂದಿದ್ದಾರೆ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇಂತಹ ಪ್ರಧಾನಿಗಳು ದೇಶದಲ್ಲಿರುವಾಗ ನಾನು ಸಹ ಶಾಸಕನಾಗಿರುವುದಕ್ಕೆ ಬಹಳ ಖುಷಿ ಇದೆ ಎಂದರು.
ಮೋದಿ ಅವರು ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೇ ದೇಶದ ಆಡಳಿತ ನಡೆಸುತ್ತಿದ್ದಾರೆ. ನಾವು ನಿರೀಕ್ಷೆ ಮಾಡದಂತಹ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡು ದಿಟ್ಟತೆ ತೋರಿದ್ದಾರೆ. ಅವರ ಕಲ್ಪನಾ ಶಕ್ತಿ ಮತ್ತು ಅವರ ವಿವೇಚನಾ ಶಕ್ತಿಗೆ ದೊಡ್ಡ ಸಲಾಮ್. ಮುಂದಿನ ನಾಲ್ಕು ವರ್ಷ ಮಾತ್ರವಲ್ಲ, ಇನ್ನೂ ಹತ್ತು ವರ್ಷಗಳ ಕಾಲ ಮೋದಿ ಅವರ ನೇತೃತ್ವದಲ್ಲೇ ದೇಶ ಮುನ್ನಡೆಯಲಿ. ದೇವಿ ಚಾಮುಂಡೇಶ್ವರಿ ಅವರಿಗೆ ಶಕ್ತಿ ನೀಡಲಿ ಎಂದರು.
ಸಮಗ್ರ ಅಭಿವೃದ್ಧಿ ಮಾಡಿದರೆ ತಾನಾಗಿಯೇ ಉದ್ಯೋಗ ಸೃಷ್ಟಿಯಾಗುತ್ತದೆ. ದೇಶದಲ್ಲಿ 50-60 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಮಾಡಲಾಗದ ಕೆಲಸಗಳನ್ನು ಕೇವಲ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಲಿಲ್ಲ ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಆದರೆ, ಹೆದ್ದಾರಿ, ರಸ್ತೆ, ರೈಲ್ವೆ ಅಭಿವೃದ್ಧಿ ಮಾಡಿಲ್ಲವಾ? ಅದರಿಂದಲೇ ಉದ್ಯೋಗ ಸೃಷ್ಟಿ ಆಗಿಲ್ಲವಾ? ನಾವು 15 ಲಕ್ಷ ಕೊಡುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಕಾಂಗ್ರೆಸ್‌ನವರು 200 ಯೂನಿಟ್ ವಿದ್ಯುತ್ ಕೊಡುತ್ತೇವೆ ಎಂದು ಹೇಳಿದರು. ಆದರೆ ಕೊಟ್ಟರಾ? ಕಳೆದ 10 ವರ್ಷಗಳಲ್ಲಿ 90 ಸಾವಿರ ಕಿಮೀ ರಸ್ತೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಇದನ್ನೆಲ್ಲಾ ತುಲನೆ ಮಾಡಬೇಕಲ್ಲವಾ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.