ಮೋದಿ ಜತೆ ಸಂವಾದಕ್ಕೆ ರೈತ ಚಂದ್ರಪ್ಪ ಆಯ್ಕೆ

23-klr-5
Published on

ಕೋಲಾರ : ಜಿಲ್ಲೆಯ ರೈತರಿಗೆ ನೀರಿನ ಸೌಲಭ್ಯವೊಂದು ಸಿಕ್ಕಿದರೆ ಸಾಕು, ಬೇರೇನೂ ಬೇಕಿಲ್ಲ. ಹಾಗಾಗಿ ಜಿಲ್ಲೆಗೆ ನೀರಾವರಿ ವ್ಯವಸ್ಥೆ ಕಲ್ಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೊದಲ ಆದ್ಯತೆಯಾಗಿ ಕೇಳುತ್ತೇನೆ ಎಂದು ಪ್ರಗತಿಪರ ರೈತ ಜುಂಜನಹಳ್ಳಿಯ ವಿ.ಚಂದ್ರಪ್ಪ ಮನದಿಂಗಿತ ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನವಾದ ಡಿ.25ರಂದು ಮೋದಿ ಹಮ್ಮಿಕೊಂಡಿರುವ ರೈತರೊಂದಿಗಿನ ಸಂವಾದದಲ್ಲಿ ಪಾಲ್ಗೊಳ್ಳಲು ಅವಕಾಶ ಗಿಟ್ಟಿಸಿಕೊಂಡಿರುವ ಬಂಗಾರಪೇಟೆಯ ರೈತ ಚಂದ್ರಪ್ಪ ವಿಜಯವಾಣಿ ಜತೆ ಸಂತಸ ಹಂಚಿಕೊಂಡರಲ್ಲದೆ ಪ್ರಧಾನಿಗಳ ಜತೆ ತಾವು ಮಾತನಾಡಲು ಉದ್ದೇಶಿಸಿರುವ ಅಂಶಗಳನ್ನು ಬಿಚ್ಚಿಟ್ಟರು. ಕೋಲಾರ ಜಿಲ್ಲೆಗೆ ನೀರಿನದ್ದೇ ಸಮಸ್ಯೆ. ನೀರು ಕೊಟ್ಟರೆ ಸಾಕು, ರೈತ ಇಡೀ ನಾಡಿಗೆ ಹಣ್ಣು, ತರಕಾರಿ ಬೆಳೆದು ಕೊಡುವ ಸಾಮರ್ಥ್ಯ ಹೊಂದಿದ್ದಾನೆ. ಜಿಲ್ಲೆಗೆ ನದಿ ಜೋಡಣೆ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವುದು, ಎತ್ತಿನಹೊಳೆ ಯೋಜನೆ ಮೂಲಕ ಆದಷ್ಟು ಬೇಗ ಕೆರೆಗಳಿಗೆ ನೀರು ಹರಿಸುವಂತೆ ಹಾಗೂ ರೈತರಿಗೆ ಇನ್ನಷ್ಟು ಕೃಷಿ ಸಾಲ ಕಲ್ಪಿಸುವಂತೆ ಮನವಿ ಮಾಡಲು ಉದ್ದೇಶಿಸಿದ್ದೇನೆ ಎನ್ನುತ್ತಾರೆ ಚಂದ್ರಪ್ಪ. ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ರೈತರಿಗೆ ಅನುಕೂಲವಾಗುತ್ತದೆ. ರೈತ ಇಷ್ಟ ಬಂದ ಕಡೆ ಖರೀದಿದಾರನಿಗೆ ಮಾರಾಟ ಮಾಡಬಹುದು. ಇದರಿಂದ ಸೂಕ್ತ ಬೆಲೆ ಸಿಗುವ ಅವಕಾಶ ಇರುತ್ತದೆ ಎಂದು ಕಾಯ್ದೆ ತಿದ್ದುಪಡಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಯಾಗಿರುವ ಚಂದ್ರಪ್ಪ ಅವರ ಖಾತೆಗೆ 6000 ರೂ. ಜಮಾ ಆಗಿದೆ. ಸಹಕಾರಿ ಸಂಘಗಳ ಮೂಲಕ ಸಾಲಸೌಲಭ್ಯ ಪಡೆದುಕೊಂಡಿದ್ದಾರೆ. ಚಂದ್ರಪ್ಪ ಬಿಎ ಪದವೀಧರ, ಕೃಷಿ ಕುಟುಂಬದಿಂದ ಬಂದವರಾದ್ದರಿಂದ ಕೃಷಿಯಲ್ಲೇ ತೊಡಗಿಸಿಕೊಂಡಿದ್ದಾರೆ. 10 ಎಕರೆ ಜಮೀನಿನಲ್ಲಿ ಆಲೂಗಡ್ಡೆ, ಟೊಮ್ಯಾಟೊ, ಕ್ಯಾಪ್ಸಿಕಂ ಬೆಳೆಯುತ್ತಿದ್ದಾರೆ. ನೀರಿನ ವ್ಯವಸ್ಥೆಗೆ ಬೋರ್‌ವೆಲ್ ಕೊರೆಸಿದ್ದಾರೆ. ಹನಿ ನೀರಾವರಿ ಅಳವಡಿಸಿಕೊಳ್ಳುವ ಮೂಲಕ ಕೃಷಿಯಲ್ಲಿ ಖುಷಿಯ ಜೀವನ ನಡೆಸುತ್ತಿದ್ದಾರೆ. ನಬಾರ್ಡ್‌ನಿಂದ ಗೋದಾಮು ನಿರ್ಮಾಣಕ್ಕೆ ಆರ್ಥಿಕ ನೆರವು ಪಡೆದಿದ್ದಾರೆ. ಬಂಗಾರಪೇಟೆಯ ಹುಣಸಹಳ್ಳಿಯ ಸೊಸೈಟಿ ಕಾರ್ಯದರ್ಶಿಯಾಗಿದ್ದಾರೆ. ರಿಹರ್ಸಲ್: ಚಂದ್ರಪ್ಪ ಅವರಿಗೆ ಬುಧವಾರ ಬೆಂಗಳೂರಿನ ನಬಾರ್ಡ್ ಕಚೇರಿಯಲ್ಲಿ ಸೂಕ್ತ ಮಾಹಿತಿ ನೀಡಲಾಯಿತಲ್ಲದೆ ಯಾವ ರೀತಿ ಮಾತನಾಡಬೇಕು, ಎಷ್ಟು ನಿಮಿಷ ಮಾತನಾಡಲು ಕಾಲಾವಕಾಶ ಸಿಗುತ್ತದೆ ಎಂಬಿತ್ಯಾದಿ ಅಂಶಗಳ ಕುರಿತು ಮಾರ್ಗದರ್ಶನ ಕೊಡಿಸಿ ರಿಹರ್ಸಲ್ ಕೂಡ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪ್ರಧಾನ ಮಂತ್ರಿಗಳ ಜತೆ ಮಾತನಾಡಲು ಅವಕಾಶ ಸಿಕ್ಕಿದ್ದಕ್ಕೆ ಖುಷಿ ಆಗಿದೆ. ಸಿಗುವ ಕಾಲಾವಕಾಶದಲ್ಲಿ ಜಿಲ್ಲೆಯ ರೈತರ ಪರ ಸಾಧ್ಯವಾದಷ್ಟು ವಿಚಾರಗಳನ್ನು ಗಮನಕ್ಕೆ ತರಲು ಪ್ರಯತ್ನಿಸುತ್ತೇನೆ. ನೀರಾವರಿ ಸೌಲಭ್ಯಕ್ಕೆ ಕೋರಿಕೆ ಇಡುತ್ತೇನೆ. ಚಂದ್ರಪ್ಪ, ರೈತ ರೈತರೊಂದಿಗೆ ಪ್ರಧಾನಿ ಮೋದಿ ನಡೆಸುವ ಸಂವಾದದಲ್ಲಿ ಬಂಗಾರಪೇಟೆ ರೈತ ಚಂದ್ರಪ್ಪ ಆಯ್ಕೆಯಾಗಿದ್ದಾರೆ. ಪ್ರಧಾನಿಗಳು ಆಯ್ದ ರೈತರಿಂದ ಅನುಭವ ಆಲಿಸಲಿದ್ದಾರೆ. ಚಂದ್ರಪ್ಪ ವಾರ್ಷಿಕವಾಗಿ 35ರಿಂದ 40 ಲಕ್ಷ ರೂ. ಆದಾಯ ಗಳಿಸುತ್ತಿದ್ದು, ಜಿಲ್ಲೆಯ ರೈತರಿಗೆ ಮಾದರಿಯಾಗಿದ್ದಾರೆ. ಸಿ ಸತ್ಯಭಾಮ, ಜಿಲ್ಲಾಧಿಕಾರಿ ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net