ಮೋಟಾರು ಕದಿಯುತ್ತಿದ್ದ ಕಳ್ಳರ ಬಂಧನ

17BTP02
Published on

ಬೆಟ್ಟದಪುರ: ಬೆಟ್ಟದಪುರ ಸೇರಿದಂತೆ ವಿವಿಧ ಗ್ರಾಮಗಳ ಜಮೀನುಗಳು ಹಾಗೂ ಮೆಕಾನಿಕ್ ಅಂಗಡಿಗಳಲ್ಲಿ ಮೋಟಾರುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬೆಟ್ಟದಪುರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಟ್ಟದಪುರದ ಇಬ್ರಾಹಿಂ, ಗೌಸ್, ಅಭಿಲಾಶ್, ಅರಕಲಗೂಡು ತಾಲೂಕಿನ ಸೆಣಬಿನಕುಪ್ಪೆ ಗ್ರಾಮದ ಪುಟ್ಟರಾಜು ಬಂಧಿತರು.
ಕಳೆದ ಏಪ್ರಿಲ್ ತಿಂಗಳಿನಲ್ಲಿ ಟ್ರ್ಯಾಕ್ಟರ್ ಮೆಕಾನಿಕ್ ಹಾಗೂ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಒಂದೂವರೆ ಲಕ್ಷ ರೂ. ಮೌಲ್ಯದ ಕಬ್ಬಿಣದ ನೇಗಿಲು, ಡಿಸ್ಕ್, ಬಾಂಡ್ಲಿ, ನೀರೆತ್ತುವ ಮೋಟಾರ್ ಪಂಪ್, ಕೇಬಲ್ ಕದ್ದೊಯ್ದಿದ್ದ ಕಳ್ಳರು, ನಿರ್ಜನ ಪ್ರದೇಶದಲ್ಲಿ ಅವುಗಳೆಲ್ಲವನ್ನು ಜಜ್ಜಿ ಮೈಸೂರಿನ ಬನ್ನಿಮಂಟಪದ ಸಮೀಪವಿರುವ ಗುಜರಿ ಅಂಗಡಿಗೆ ಮಾರಾಟ ಮಾಡಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಅಲ್ಲದೆ ರಾತ್ರಿ ವೇಳೆ ಸೂಳೆಕೋಟೆ ಗ್ರಾಮದ ಕೆರೆ ಮತ್ತು ಮರದೂರು ಮರಿಗೌಡನ ಕೊಪ್ಪಲು ಗ್ರಾಮದ ಸಮೀಪ ನೀರು ಹರಿಯುವ ಹಳ್ಳಕ್ಕೆ ಅಳವಡಿಸಿದ 9 ಡೀಸೆಲ್ ಮೋಟಾರುಗಳನ್ನು ಕಳ್ಳತನ ಮಾಡಿ ಮಾರಾಟ ಮಾಡಿದ್ದು, ಈ ಹಣವನ್ನು ಹಂಚಿಕೊಳ್ಳಲೆಂದು ಜು.15ರಂದು ಬೆಳಗಿನ ಜಾವ ಬೆಟ್ಟದಪುರದ ಹೊರಭಾಗದಲ್ಲಿ ನಾಲ್ವರು ಒಟ್ಟಿಗೆ ಸೇರಿದ್ದರು. ಈ ವೇಳೆ ಪಾಲು ಹಂಚಿಕೆಯಲ್ಲಿ ಗಲಾಟೆ ಉಂಟಾಗಿ ಪೊಲೀಸರಿಗೆ ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್ ಎಂ.ಎತ್ತನಮನಿ, ಸಿಬ್ಬಂದಿ ದಿಲೀಪ್, ಶತ್ರುಘ್ನ, ಮಲ್ಲೇಶ್, ರುದ್ರೇಶ್, ಪ್ರೇಮ್‌ಕುಮಾರ್, ಸತೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net