

ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉತ್ತಮ ರ‌್ಯಾಂಕ್ ಪಡೆದು ಗುರು, ಹಿರಿಯರು ಹಾಗೂ ತಂದೆ ತಾಯಿಗಳಿಗೆ ಗೌರವ ತರಬೇಕು ಎಂದು ಲೇಖಕಿ ಲಕ್ಷ್ಮೀ ಕಿಶೋರ್ ಅರಸ್ ಹೇಳಿದರು.
ಶ್ರೀ ಚಾಮರಾಜೇಂದ್ರ ಸ್ಕೂಲ್ ಫಾರ್ ಎಕ್ಸಲೆನ್ಸ್‌ನಲ್ಲಿ ಶನಿವಾರ ಆಯೋಜಿಸಿದ್ದ ‘ಕಲಾ ಸೌರಭ-2’ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಎಸ್‌ಇಪಿ ಶಿಕ್ಷಣ ಪದ್ಧತಿ ಜಾರಿಯಲ್ಲಿದೆ. ಆದರೆ, ಚಾಮರಾಜೇಂದ್ರ ಸ್ಕೂಲ್‌ನಲ್ಲಿ ಎನ್‌ಇಪಿ ಶಿಕ್ಷಣ ಪದ್ಧತಿ ಇದೆ. ಇದರಿಂದ ಇಲ್ಲಿನ ಮಕ್ಕಳಿಗೆ ಭವಿಷ್ಯದಲ್ಲಿ ತುಂಬ ಅನುಕೂಲವಾಗುತ್ತದೆ. ಅವರು ಯಾವುದೇ ಕ್ಷೇತ್ರದಲ್ಲಾದರೂ ತಮ್ಮನ್ನು ತಾವು ತೆರೆದುಕೊಳ್ಳಲು ಅವಕಾಶ ಸಿಗಲಿದೆ ಎಂದರು.
ಇಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ, ಸಂಸ್ಕೃತಿ, ಶಿಸ್ತು, ಬದ್ಧತೆ, ಮೌಲ್ಯ ಹೀಗೆ ಎಲ್ಲವನ್ನು ಕಲಿಸಲಾಗುತ್ತಿದೆ. ವಿಶೇಷ ರೀತಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಕಂಪ್ಯೂಟರ್ ಯುಗದಲ್ಲಿ ಬಹುತೇಕ ಮಕ್ಕಳು ಮೊಬೈಲ್‌ಗೆ ಮಾರು ಹೋಗಿದ್ದಾರೆ. ಇಂತಹ ಸಮಯದಲ್ಲಿ ಇಲ್ಲಿನ ಶಿಕ್ಷಕರು, ಮಕ್ಕಳನ್ನು ಮೊಬೈಲ್‌ನಿಂದ ಶಿಕ್ಷಣದ ಜಗತ್ತಿಗೆ ಎಳೆದು ತಂದಿದ್ದಾರೆ. ಸಮಾಜಮುಖಿಯಾಗಿ ಯಾವ ರೀತಿ ಬೆಳೆಯಬೇಕು, ನಾಯಕತ್ವದ ಗುಣಗಳನ್ನು ಹೇಗೆ ಮೈಗೂಡಿಸಿಕೊಳ್ಳಬೇಕು ಎನ್ನುವುದನ್ನು ಕಲಿಸುತ್ತಿದ್ದಾರೆ. ನಮ್ಮ ಆಚರಣೆ ಮತ್ತು ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಸಂಬಂಧಗಳಿಗೆ ಬೆಲೆಕೊಡುವುದು, ಭಾವನೆಗಳಿಗೆ ಸ್ಪಂದಿಸುವುದನ್ನು ಕಲಿಸುತ್ತಿದ್ದಾರೆ ಎಂದರು.
ಶ್ರೀ ಚಾಮರಾಜೇಂದ್ರ ಅರಸು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ಭಾರತೀ ಶ್ರೀಧರ್ ರಾಜೇ ಅರಸ್ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ‘ಹಳೆ ಬೇರು ಹೊಸ ಚಿಗುರು’ ಎಂಬಂತೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ನಾವು ದೇಶಕ್ಕೆ ಮತ್ತು ಜಗತ್ತಿಗೆ ಒಳ್ಳೆಯ ಪ್ರಜೆಗಳನ್ನು ನೀಡುತ್ತಿದ್ದೇವೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಮಹೇಶ್ ಎನ್.ಅರಸ್ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಕೊಡಿಸುವುದರೊಂದಿಗೆ ಮಾನವೀಯ ಮೌಲ್ಯ, ಉತ್ತಮ ಗುಣವನ್ನು ಬೆಳೆಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ನಮ್ಮ ಶಾಲೆಯ ಮಕ್ಕಳಿಗೆ ಶಿಕ್ಷಣದ ಜತೆಗೆ ಮೌಲ್ಯ, ನೈತಿಕೆಯನ್ನು ಬೆಳೆಸಲಾಗುತ್ತದೆ. ಜಾತಿ, ಧರ್ಮ, ಬಣ್ಣಗಳನ್ನು ಮೀರಿ ಮಕ್ಕಳನ್ನು ವಿಶ್ವಮಾನವರನ್ನಾಗಿ ರೂಪಿಸಲಾಗುತ್ತದೆ ಎಂದರು.
ಜಂಟಿ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಟ್ರಸ್ಟಿ ಪದ್ಮಶ್ರೀ ಅರಸ್, ಪ್ರಾಂಶುಪಾಲ ಶ್ರೀವತ್ಸ ಇತರರಿದ್ದರು. ವೇದಿಕೆ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.