ಮೊಬೈಲ್ ಬೆಳಕಿನಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ

22
Published on

ಕ್ರಾಫರ್ಡ್ ಭವನದಲ್ಲಿರುವ ಪರೀಕ್ಷಾ ಭವನದಲ್ಲಿ ಗುರುವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯದಿಂದ ಮೌಲ್ಯಮಾಪಕರು ಪದವಿ ಪರೀಕ್ಷೆಗಳ ಉತ್ತರಪತ್ರಿಕೆಗಳನ್ನು ಮೊಬೈಲ್ ಫೋನ್ ಬೆಳಕಿನಲ್ಲಿ ಮೌಲ್ಯಮಾಪನ ಮಾಡಿದರು.

ಸೆಸ್ಕ್ ಮೂರು ದಿನದ ಹಿಂದೆಯೇ ಕಲಾಮಂದಿರ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂಬ ಪ್ರಕಟಣೆ ಹೊರಡಿಸಿತ್ತು. ಪತ್ರಿಕೆಗಳಲ್ಲೂ ಪ್ರಕಟವಾಗಿತ್ತು. ಮೈಸೂರು ವಿಶ್ವವಿದ್ಯಾಲಯವು ಅದಕ್ಕೆ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳದ ಕಾರಣ ಮೌಲ್ಯಮಾಪಕರು ಇಡೀ ದಿನ ತೊಂದರೆ ಅನುಭವಿಸಿದರು.

ವಯಸ್ಸಾದ ಪ್ರಾಧ್ಯಾಪಕರು ಮಂದ ಬೆಳಕಿನಲ್ಲಿ ಮೌಲ್ಯಮಾಪನ ಮಾಡಿದ್ದರಿಂದ, ಅಂಕಗಳು ವ್ಯತ್ಯಾಸವಾಗುವ ಆತಂಕ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಚಿತ್ರಗಳ ಮೂಲಕ ವ್ಯಕ್ತವಾಯಿತು. ಪರೀಕ್ಷಾಂಗ ವಿಭಾಗ ಪರ್ಯಾಯ ವ್ಯವಸ್ಥೆ ಮಾಡಿರಲಿಲ್ಲ. ಕಿಟಕಿಗಳು ದೂರದಲ್ಲಿದ್ದವು. ಮೋಡ ಕವಿದ ವಾತಾವರಣವಿದ್ದರಿಂದ ಬೆಳಕಿರಲಿಲ್ಲ. ನಾಳೆ ಉತ್ತರ ಪತ್ರಿಕೆಗಳನ್ನೂ ನೋಡುತ್ತೇವೆಂದರೂ ಅವಕಾಶ ನೀಡಲಿಲ್ಲ. ಜನರೇಟರ್ ಕೆಟ್ಟಿದ್ದು, ಡೀಸೆಲ್ ಹಾಕಲೂ ವಿಶ್ವವಿದ್ಯಾಲಯದ ಬಳಿ ಹಣವಿಲ್ಲವೆಂದು ಹೇಳಿದ್ದರಿಂದ ಸುಮ್ಮನಾದೆವು. ಮೊಬೈಲ್ ಫೋನ್ ಬೆಳಕಿನಲ್ಲಿ ಮೌಲ್ಯಮಾಪನ ಮಾಡುವಂತಾಯಿತು ಎಂದು ಸಹಾಯಕ ಪ್ರಾಧ್ಯಾಪಕರೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net