

ಶೃಂಗೇರಿ: ಮೊಬೈಲ್ ಫೋನ್ ಆಧುನಿಕ ಜೀವನಕ್ಕೆ ಅಗತ್ಯವಾಗಿದ್ದರೂ ಅತಿಯಾದ ಬಳಕೆಯಿಂದ ವಿಶೇಷವಾಗಿ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಪಿಎಂಶ್ರೀ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂತೋಷ್ ಕಾಳ್ಯ ಹೇಳಿದರು.
ಮೆಣಸೆ ಪಿಎಂಶ್ರೀ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ಸಂಸತ್ ರಚನೆ ಮತ್ತು ಮಕ್ಕಳು ಮೊಬೈಲ್ ಬಳಕೆಯಿಂದ ಆಗುವ ದುಷ್ಪಾರಿಣಾಮ ಕಾರ್ಯಕ್ರಮದಲ್ಲಿ ಮಾತನಾಡಿ, ಅತಿಯಾದ ಮೊಬೈಲ್ ಬಳಕೆ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ, ನಿದ್ರಾಹೀನತೆ, ಕುತ್ತಿಗೆ ಹಾಗೂ ಬೆನ್ನು ನೋವು ಉಂಟುಮಾಡುತ್ತವೆ. ಆತಂಕ, ಖಿನ್ನತೆ ಮತ್ತು ಸಾಮಾಜಿಕ ಕೌಶಲಗಳ ಕುಂಠಿತಕ್ಕೆ ಕಾರಣವಾಗುತ್ತದೆ. ಮಕ್ಕಳು ಹೊರಗಿನ ಪ್ರಪಂಚದಿಂದ ದೂರವಾಗುತ್ತಾರೆ. ಇದರಿಂದ ಅವರ ಭಾವನಾತ್ಮಕ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.
ಮುಖ್ಯಶಿಕ್ಷಕಿ ಜಯಂತಿ ಮಾತನಾಡಿ, ಮೊಬೈಲ್‌ನಿಂದ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಮೊಬೈಲ್‌ನ್ನು ಶೈಕ್ಷಣಿಕ ವಿಷಯಕ್ಕೆ ಬಳಸಿಕೊಳ್ಳಬೇಕು ಎಂದರು.
ಎಸ್‌ಡಿಎಂಸಿ ಸದಸ್ಯರಾದ ಅರುಣ್, ಸುಶ್ಮಿತಾ, ಶಿಕ್ಷಕರಾದ ಉಮೇಶ್, ಪುಷ್ಪಾ, ಕಲ್ಲೇಶ್, ಮತ್ತು ವಿದ್ಯಾರ್ಥಿ ಸಂಸತ್ ಅಧ್ಯಕ್ಷರು ಮತ್ತು ಸದಸ್ಯರು ಇದ್ದರು.