ಮೊಬೈಲ್ ಆಸ್ಪತ್ರೆ ತೆರೆಯುವಂತೆ ಒಕ್ಕೂಟಕ್ಕೆ ಪ್ರಸ್ತಾವನೆ

24tnpnews
ಬನ್ನೂರು ಪಟ್ಟಣದಲ್ಲಿ ಆಯೋಜಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಿ.ದಿವಾಕರ್, ಆರ್.ಪ್ರಮೋದ್, ದಿವ್ಯಾಶ್ರೀ ಅವರನ್ನು ಸನ್ಮಾನಿಸಲಾಯಿತು.
Published on


ಮೈಮುಲ್ ಮಾಜಿ ಅಧ್ಯಕ್ಷ ಸಿ.ಓಂಪ್ರಕಾಶ್ ಮಾಹಿತಿ


ತಿ.ನರಸೀಪುರ: ತುರ್ತು ಸಂಧರ್ಭದಲ್ಲಿ ಹಸುಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಮೊಬೈಲ್ ಆಸ್ಪತ್ರೆ ತೆರೆಯಲು ಒಕ್ಕೂಟಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮೈಮುಲ್ ಮಾಜಿ ಅಧ್ಯಕ್ಷ ಸಿ.ಓಂಪ್ರಕಾಶ್ ಹೇಳಿದರು.


ತಾಲೂಕಿನ ಬನ್ನೂರು ಪಟ್ಟಣದ ಎನ್.ಆರ್.ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಬನ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ 2021-22 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಪಶು ವೈದ್ಯರಿಗೆ ಬೇಡಿಕೆ ಇರುವ ಹಿನ್ನೆಲೆಯಲ್ಲಿ ವೈದ್ಯರ ಕೊರತೆ ಉಂಟಾಗಿದೆ. ರಾಸುಗಳು ಅನಾರೋಗ್ಯಕ್ಕೊಳಗಾದಾಗ ತುರ್ತು ಚಿಕಿತ್ಸೆ ನೀಡುವ ಸಲುವಾಗಿ ಮೈಸೂರು, ತಿ.ನರಸೀಪುರ, ಬನ್ನೂರು ವಿಭಾಗಕ್ಕೆ ಮೊಬೈಲ್ ಆಸ್ಪತ್ರೆ ಮಾದರಿಯಲ್ಲಿ ವ್ಯಾನ್‌ಗಳನ್ನು ನಿಯೋಜಿಸುವ ಸಂಬಂಧ ಒಕ್ಕೂಟಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಹೈನೋದ್ಯಮಕ್ಕೆ ಹೆಚ್ಚಿನ ಒತ್ತು ಕೊಡಲಾಗಿರುವುದರಿಂದ ಹಾಲು ಉತ್ಪಾದನೆ ಹೆಚ್ಚಾಗಿದೆ. 2 ಸಾವಿರ ಲೀಟರ್ ಹಾಲಿನೊಂದಿಗೆ ಆರಂಭಗೊಂಡ ಮೈಸೂರು-ಚಾಮರಾಜನಗರ ಒಕ್ಕೂಟ ಈಗ ಪ್ರತ್ಯೇಕಗೊಂಡ ನಂತರ ಮೈಸೂರು ಒಕ್ಕೂಟಕ್ಕೆ ಸರಾಸರಿ 10 ಲಕ್ಷ ಲೀಟರ್ ಹಾಲು ಸರಬರಾಜಾಗುತ್ತಿದೆ ಎಂದರು.


ಮೈಮುಲ್ ನಿರ್ದೇಶಕ ಆರ್.ಚೆಲುವರಾಜು ಮಾತನಾಡಿ, 45 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಬನ್ನೂರು ಹಾಲು ಉತ್ಪಾದಕರ ಸಹಕಾರ ಸಂಘ ತಾಲೂಕಿನಲ್ಲಿಯೇ ಹೆಚ್ಚು ಹಾಲು ಉತ್ಪಾದಿಸುವ ಸಂಘವಾಗಿ ಹೊರಹೊಮ್ಮಿದೆ ಎಂದರು.


ಕಾರ್ಯದರ್ಶಿ ರಾಘು ಸಂಘದ ವಾರ್ಷಿಕ ವರದಿ ಮಂಡಿಸಿ, ಪ್ರಸಕ್ತ ಸಾಲಿನಲ್ಲಿ ಸಂಘ 27 ಲಕ್ಷ ರೂ.ಗಳ ನಿವ್ವಳ ಲಾಭಗಳಿಸಿದೆ. ಲಾಭಾಂಶದ ಪೈಕಿ ಉತ್ಪಾದಕರಿಗೆ 19 ಲಕ್ಷ ರೂ. ಬೋನಸ್ ವಿತರಿಸಲಾಗಿದೆ ಎಂದರು.


ಇದೇ ವೇಳೆ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಸಿ.ದಿವಾಕರ್, ಮಾರ್ಗ ವಿಸ್ತರಣಾಧಿಕಾರಿ ಆರ್.ಪ್ರಮೋದ್, ಎನ್.ಶೃತಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಆರ್.ಮಾಯಪ್ಪ,ಉಪಾಧ್ಯಕ್ಷ ಶ್ರೀನಿವಾಸ್,ನಿರ್ದೇಶಕರಾದ ಬಿ.ಕೆ.ಕಾಳೇಗೌಡ, ಬಿ.ಎಚ್.ರಾಜು, ಪಿ.ರಮೇಶ್, ಬಿ.ಪಿ.ಸ್ವಾಮಿ, ಬಿ.ಇ.ಮಹದೇವ ಸ್ವಾಮಿ, ಎಂ.ರಾಜು, ಎಸ್.ಜಯಪದ್ಮ, ಮಂಜುಳಾ, ಕನ್ಯಾರತ್ನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net