ಬೇಲೂರು: ಈ ಸಾಲಿನ ಎಸ್‌ಎಸ್‌ಎಲ್ ಸಿ ಫಲಿತಾಂಶ ಹೆಚ್ಚಳ ಸಂಬಂಧ ಬೇಲೂರು ತಾಲೂಕಿನಾದ್ಯಂತ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಹೇಳಿದರು.
ತಿಂಗಳ ಗುರಿ 5ರ ಅಂಗವಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆ, ಪ್ರೌಢಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರ ಸಂಘ ಹಾಗೂ ಖಾಸಗಿ ಶಾಲೆಗಳ ಒಕ್ಕೂಟದಿಂದ ಪಟ್ಟಣದ ವಿಶ್ವ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಫಲಿತಾಂಶ ಹೆಚ್ಚಳ ಸಂಬಂಧ ಎಲ್ಲರ ಸಹಕಾರದೊಂದಿಗೆ ‘ನಮ್ಮ ನಡೆ, ಶಾಲಾ ಶೈಕ್ಷಣಿಕ ಪ್ರಗತಿಯ ಕಡೆ’ ಎಂಬ ವಾಕ್ಯದೊಂದಿಗೆ ಹಲವು ಕಾರ್ಯಕ್ರಮ ಅನುಷ್ಠಾನ ಮಾಡುತ್ತಿದ್ದೇವೆ. ಕಳೆದ ವರ್ಷ ಹಾಸನ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿತ್ತು. ಈ ವರ್ಷವೂ ಅದೇ ಸ್ಥಾನ ಉಳಿಸುವುದಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸಿಬೇಕು ಎಂದು ಮನವಿ ಮಾಡಿದರು.
ಮುಖ್ಯ ಪರೀಕ್ಷೆಗೆ ಬರುವಂತಹ ಪ್ರಮುಖ ಪ್ರಶ್ನೆಗಳನ್ನು ಆಯ್ದ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚಿಸಿ ಒಂದು ಚಿಕ್ಕ ಪುಸ್ತಕ ಮಾಡಿ ಒಂದೊಂದು ಪ್ರಶ್ನೆಗೆ ಮೂರು ಭಾರಿ ಉತ್ತರ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಮೂರು ಕಿರು ಪುಸ್ತಕಗಳನ್ನು ನೀಡಿದ್ದು, ಡಿಸೆಂಬರ್ ತಿಂಗಳ ಗುರಿ 5ರ ನಾಲ್ಕನೇ ಪುಸ್ತಕವನ್ನು ಬೆಂಗಳೂರಿನ ಸಿಐಡಿ ವಿಭಾಗದ ಡಿವೈಎಸ್‌ಪಿ ಮೊಹಮ್ಮದ್ ರಫಿ ಅವರ ಸಹಕಾರದಿಂದ 2082 ಪುಸ್ತಕ ಪ್ರಿಂಟ್ ಮಾಡಿಸಿ ಮಕ್ಕಳಿಗೆ ನೀಡುತಿದ್ದೇವೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ಸಿಐಡಿ ವಿಭಾಗದ ಡಿವೈಎಸ್‌ಪಿ ಮೊಹಮ್ಮದ್ ರಫಿ ಮಾತನಾಡಿ, ಅಂಬೇಡ್ಕರ್ ಹೇಳಿದಂತೆ ವಿದ್ಯೆ ಎಂಬ ಹುಲಿಯ ಹಾಲು ಕುಡಿದವರು ಘರ್ಜಿಸಲೇಬೇಕು. ವಿದ್ಯಾವಂತ ಛಲದಿಂದ ಅಂದು ಕೊಂಡಿದ್ದನ್ನು ಸಾಧಿಸಲೇಬೇಕು. ಅವಕಾಶಗಳು ಎಂದೂ ನಿನ್ನ ಮನೆಯ ಬಾಗಿಲನ್ನು ಎರೆಡೆರಡು ಬಾರಿ ಬಡಿಯಲಾರವು ಎಂಬ ಮಾತಿದೆ. ಹತ್ತನೆ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮತ್ತೆ ಈ ಸಮಯ ಎಂದೂ ಸಿಗಲಾರದು. ವಿದ್ಯಾರ್ಥಿಗಳು ಜ್ಞಾನದ ರೆಕ್ಕೆಯನ್ನು ಬಿಚ್ಚಿ ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಶಿವಮರಿಯಪ್ಪ, ದೈಹಿಕ ಶಿಕ್ಷಣ ಪರಿವೀಕ್ಷಕ ಪಾಲಾಕ್ಷ ಮೂರ್ತಿ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮುಳ್ಳಯ್ಯ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಹೇಮಂತ್, ಇಸಿಒಗಳಾದ ಶಿವಪ್ಪ, ರವಿಕುಮಾರ್, ಗೋಪಾಲ್ ಇತರರು ಇದ್ದರು.