ಮೊದಲ ಭಾನುವಾರದ ಲಾಕ್‌ಡೌನ್‌ಗೆ ಮಂಗಳೂರು ಸ್ತಬ್ಧ

Published on

ಎಲ್ಲಾ ಅಂಗಡಿ ಮುಂಗಟ್ಟು, ಮಳಿಗೆಗಳೂ ಮುಚ್ಚಿದ್ದು, ಮೆಡಿಕಲ್ಸ್‌, ಹಾಲಿನ ಅಂಗಡಿಗಳು, ಪೇಪರ್‌ ಸ್ಟಾಲ್‌ ಮಾತ್ರವೇ ತೆರೆದಿದ್ದವು. ತರಕಾರಿ, ದಿನಸಿ, ಮಾಂಸದ ಅಂಗಡಿಗಳನ್ನೂ ಮುಚ್ಚಲಾಗಿತ್ತು. ಶನಿವಾರ ರಾತ್ರಿ ಪ್ರಾರಂಭಗೊಂಡಿರುವ ಲಾಕ್‌ಡೌನ್‌ ಸೋಮವಾರ ಬೆಳಗ್ಗೆ ೫ರ ವರೆಗೆ ಇರಲಿದೆ.

ಮೊದಲೇ ಮಾಹಿತಿ ಇದ್ದ ಕಾರಣ ಹೆಚ್ಚು ಮಂದಿಯ ಓಡಾಟ ಕಂಡುಬರಲಿಲ್ಲ. ಕೆಲವೇ ಮಂದಿ ಓಡಾಡುತ್ತಿದ್ದವರನ್ನು ಪೊಲೀಸರು ಹಿಂದೆ ಕಳುಹಿಸುತ್ತಿದ್ದರು. ಶುಚಿತ್ವ ನಿರ್ವಹಣೆ ಮಾಡುತ್ತಿದ್ದ ಪೌರಕಾರ್ಮಿಕರನ್ನು ಹೊರತುಪಡಿಸಿದರೆ ಬೇರೆ ಯಾರ ಸಂಚಾರವಿರಲಿಲ್ಲ. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಭಾನುವಾರವೂ ಪೊಲೀಸರು ನಾಕಾಬಂದಿ ಮಾಡಿದ್ದರು.

ಪೊಲೀಸರು ಜಿಲ್ಲಾದ್ಯಂತ ಶನಿವಾರ ರಾತ್ರಿಯೇ ಕರ್ಫ್ಯುಗೆ ಬೇಕಾದ ಸಿದ್ಧತೆ ನಡೆಸಿದ್ದಲ್ಲದೆ ರಾತ್ರಿಯೇ ಬ್ಯಾರಿಕೇಡ್‌ ಹಾಕಿ ಸಂಚರಿಸುವವರಿಗೆ ಎಚ್ಚರಿಗೆ ನೀಡುತ್ತಿದ್ದರು. ಮಂಗಳೂರು ನಗರದ ಒಳಭಾಗಕ್ಕೆ ಬರುವುದಕ್ಕೆ ಪೂರ್ತಿ ನಿಯಂತ್ರಣ ಹೇರಿದ್ದು ಅಲ್ಲಲ್ಲಿ ನಾಕಾಬಂದಿ ಮಾಡಿದ್ದರು. ಭಾನುವಾರ ಬೆಳಗ್ಗೆಯೂ ಜನರ ಸಂಚಾರ ತೀರಾ ವಿರಳವಾಗಿತ್ತು.

ಸರ್ಕಾರದ ಸೂಚನೆ ಮೇರೆಗೆ ಕರೊನಾ ನಿಯಂತ್ರಣದ ಉದ್ದೇಶದಿಂದ ಹಮ್ಮಿಕೊಂಡಿರುವ ಮೊದಲ ಭಾನುವಾರದ ಲಾಕ್‌ಡೌನ್‌ಗೆ ಜಿಲ್ಲೆ ಸ್ತಬ್ಧಗೊಂಡಿದೆ.

ವಿಜಯವಾಣಿ ಸುದ್ದಿಜಾಲ ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net