

ಮಾಜಿ ಪ್ರಧಾನಿ ಡಾ.ಮನಮೋಹನಸಿಂಗ್ ಅವರಿಗೆ ಮೈಸೂರಿನೊಂದಿಗೂ ಒಡನಾಟವಿತ್ತು. ಅಲ್ಲದೆ ಶತಮಾನ ಪೂರೈಸಿರುವ ಮೈಸೂರು ವಿಶ್ವವಿದ್ಯಾಲಯಕ್ಕೆ ವಿಶೇಷ ಅನುದಾನ ನೀಡಿ ಹೆಚ್ಚಿನ ಸಂಶೋಧನೆ ನಡೆಯಲು ಅನುವು ಮಾಡಿಕೊಟ್ಟಿದ್ದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ 3 ದಶಕದ ಹಿಂದೆ ಎರಡು ಅವಧಿಗೆ ಕುಲಪತಿಯಾಗಿದ್ದ ಪ್ರೊ.ಎಂ.ಮಾದಯ್ಯ ಅವರು ಮನಮೋಹನ್ ಸಿಂಗ್ ಅವರ ಆತ್ಮೀಯ ಗೆಳೆಯರಾಗಿದ್ದರು. ಅರ್ಥಶಾಸ್ತ್ರದ ಪ್ರಾಧ್ಯಾಪಕರೂ ಆಗಿದ್ದ ಪ್ರೊ.ಮಾದಯ್ಯ ಅವರ ಒಡನಾಡಿಯಾಗಿದ್ದ ಮನಮೋಹನಸಿಂಗ್ ಅವರು ಸ್ನೇಹಿತನ ಜತೆಗೆ ಮೈಸೂರು ಬಗ್ಗೆಯೂ ಅಭಿಮಾನ ಹೊಂದಿದ್ದರು. ಇದನ್ನು ಪ್ರೊ.ಮಾದಯ್ಯ ಅವರು ಹಲವು ಕಾರ್ಯಕ್ರಮಗಳಲ್ಲಿ ಉಲ್ಲೇಖಿಸಿದ್ದರು.
ಮಾದಯ್ಯ ಹಾಗೂ ಮನಮೋಹನ್ ಸಿಂಗ್ ಐದು ದಶಕಗಳಿಂದಲೂ ಸ್ನೇಹಿತರು. ಆರ್ಥಿಕ, ಶಿಕ್ಷಣದ ಬಗ್ಗೆ ಇಬ್ಬರು ಚರ್ಚಿಸುತ್ತಿದ್ದರು. ಆದರೆ ವಯೋಸಹಜ ಕಾರಣದಿಂದ ಐದಾರು ವರ್ಷಗಳಿಂದ ಇವರಿಬ್ಬರು ಭೇಟಿ ಮಾಡಿರಲಿಲ್ಲ. ಇದೇ ವರ್ಷ ಮೇ ತಿಂಗಳಲ್ಲಿ ಪ್ರೊ.ಮಾದಯ್ಯ ನಿಧನರಾಗಿದ್ದರು.
1992ರಲ್ಲಿ ಪಿ.ವಿ.ನರಸಿಂಹರಾವ್ ಪ್ರಧಾನಿಯಾಗಿದ್ದಾಗ ದೇಶದ ಹಣಕಾಸು ಸಚಿವರಾಗಿದ್ದ ಡಾ.ಮನಮೋಹನ್ ಸಿಂಗ್ ಅವರು, ಮೈಸೂರು ವಿವಿ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಕ್ಕಳಿಗೆ ಪದವಿ ಪ್ರದಾನ ಮಾಡಿ ಮುಖ್ಯಭಾಷಣವನ್ನೂ ಮಾಡಿದ್ದರು. ಅಲ್ಲದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಇದರಿಂದಾಗಿಯೇ ಮೈಸೂರು ವಿವಿ ಬಗ್ಗೆ ವಿಶೇಷ ಗೌರವ ಹೊಂದಿದ್ದರು.
‘ಮೈಸೂರು ವಿವಿ ಶ್ರೇಷ್ಠ ವಿವಿಗಳಲ್ಲಿ ಒಂದು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ನಡೆಯಲಿ ಎಂದು ಯುಜಿಸಿಯಿಂದ 100 ಕೋಟಿ ರೂ. ಅನುದಾನ ನೀಡಲಾಗಿದೆ. ಅದು ಸದ್ಬಳಕೆಯಾಗಲಿ. ನೀವು ಮೈಸೂರಿಗೆ ಹೋಗುತ್ತೀರಿ’ ಎಂದು ಮನಮೋಹನ್ ಸಿಂಗ್ ಅಂದಿನ ಕರ್ನಾಟಕದ ರಾಜ್ಯಪಾಲರಾಗಿದ್ದ ಎಚ್.ಆರ್.ಭಾರದ್ವಾಜ್ ಅವರಿಗೆ ಹೇಳಿದ್ದನ್ನು ಅವರು ಹಲವು ಬಾರಿ ನೆನಪಿಸಿಕೊಂಡಿದ್ದರು.