ಮೈಸೂರು ರೈಲ್ವೆ ವಿಭಾಗಕ್ಕೆ 886 ಕೋಟಿ ರೂ. ಆದಾಯ

Published on

ಮೈಸೂರು: ಪ್ರಸ್ತಕ ಸಾಲಿನ 3ನೇ ತ್ರೈಮಾಸಿಕ ಅಂತ್ಯದವರೆಗೆ ಮೈಸೂರು ರೈಲ್ವೆ ವಿಭಾಗ ಅತ್ಯುತ್ತಮ ಪ್ರದರ್ಶನ ನೀಡಿದ್ದು, 2022ರ ಡಿಸೆಂಬರ್ ಅಂತ್ಯದವರೆಗೆ 886 ಕೋಟಿ ರೂ. ಆದಾಯ ಬಂದಿದೆ. ಇದು ಹಿಂದಿನ ವರ್ಷಕ್ಕಿಂತ ಶೇ. 3ರಷ್ಟು ಹೆಚ್ಚು ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರವಾಲ್ ತಿಳಿಸಿದರು.


ಮೈಸೂರು ವಿಭಾಗದ ವತಿಯಿಂದ ನಗರದ ರೈಲ್ವೆ ಕ್ರೀಡಾ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.


ಸರಕು ಸಾಗಣೆ ವಿಭಾಗದಲ್ಲಿ 557.34 ಕೋಟಿ ರೂ. ಆದಾಯದೊಂದಿಗೆ 6.53 ಮಿಲಿಯನ್ ಟನ್ ಸರಕನ್ನು ಲೋಡ್ ಮಾಡಿದ್ದು, ಇದು ಹಿಂದಿನ ವರ್ಷಕ್ಕೆ (504.71 ಕೋಟಿ ರೂ. ಆದಾಯ ಮತ್ತು 6.49 ಮೆಟ್ರಿಕ್ ಟನ್ ಲೋಡಿಂಗ್) ಹೋಲಿಸಿದರೆ ಕ್ರಮವಾಗಿ ಶೇ.10, ಶೇ.1ರಷ್ಟು ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.


ಮೈಸೂರು ವಿಭಾಗವು 30.93 ಕೋಟಿ ರೂ. ಇತರ ಮೂಲಗಳಿಂದ ಗಳಿಸಿದ್ದು, ಹಣಕಾಸು ಇಲಾಖೆ ಆಂತರಿಕ ತಪಾಸಣೆಯ ಸಮಯದಲ್ಲಿ ತೋರಿಸಿದ ಶ್ರದ್ಧೆಯಿಂದಾಗಿ 9 ತಿಂಗಳಿನಲ್ಲಿ 37.81 ಕೋಟಿ ರೂ. ಉಳಿತಾಯವಾಗಿದೆ ಎಂದರು.
ಮೈಸೂರು ವಿಭಾಗದ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದು ತಿಂಗಳಿನಲ್ಲಿ ಸರಕು ಸಾಗಣೆಯಲ್ಲಿ 100 ಕೋಟಿ ರೂ. ಗಳಿಕೆ ದಾಟಿದ್ದು, 108.60 ಕೋಟಿ ರೂ. ಸಾಗಣೆ 2022ರ ಡಿಸೆಂಬರ್‌ನಲ್ಲಿ ಸಾಧ್ಯವಾಗಿದೆ ಎಂದು ತಿಳಿಸಿದರು.


ರೈಲ್ವೆಯು ಪ್ರಯಾಣಿಕರ ಸೌಕರ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡಿದ್ದು, ಮೈಸೂರು ವಿಭಾಗದ ವ್ಯಾಪ್ತಿಯ ರೈಲಿನಲ್ಲಿ ಕಳೆದ ಡಿಸೆಂಬರ್‌ವರೆಗೆ 23.61 ಮಿಲಿಯನ್ ಜನರು ಪ್ರಯಾಣಿಸಿದ್ದಾರೆ. ರೈಲುಗಳ ಸಮಯ ಪಾಲನೆಯ ಕಾರ್ಯಕ್ಷಮತೆ ಉತ್ತಮವಾಗಿದ್ದು, ಮೇಲ್, ಎಕ್ಸ್‌ಪ್ರೆಸ್ ರೈಲುಗಳು ಶೇ.98.7ಕ್ಕಿಂತ ಹೆಚ್ಚು ಸಮಯ ಪಾಲನೆಯೊಂದಿಗೆ ಸಂಚರಿಸುವುದರೊಂದಿಗೆ ಗಮನಾರ್ಹ ಸುಧಾರಣೆ ಕಂಡಿದೆ ಎಂದು ತಿಳಿಸಿದರು.


ಪ್ರಯಾಣಿಕರ ಅನುಕೂಲಕ್ಕಾಗಿ 20 ನಿಲ್ದಾಣಗಳಲ್ಲಿ ಸ್ವಯಂ ವಾಚ್ಛಿತ ಘೋಷಣಾ ವ್ಯವಸ್ಥೆ ಪ್ರಾರಂಭಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ 35 ನಿಲ್ದಾಣಗಳಲ್ಲಿ ಎರಡೂ ಕಡೆಯ ಎಲ್‌ಇಡಿ ಜಿಪಿಎಸ್ ಗಡಿಯಾರ ಅಳವಡಿಸಲಾಗಿದೆ ಎಂದರು.


ಕಾರ್ಯಾಚರಣೆಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶೂನ್ಯ ಅಪಘಾತಗೊಳಿಸಲು ಎಲ್ಲ ಹಂತಗಳಲ್ಲಿ ಸುರಕ್ಷತಾ ನಿಯಮಾವಳಿ ಪಾಲಿಸಲು ಕಟಿಬದ್ಧವಾಗಿದೆ. ರೈಲ್ವೆ ಮೇಲ್ಸೇತುವೆ, ಕೆಳಸೇತುವೆ ನಿರ್ಮಿಸುವ ಮೂಲಕ ವಿಭಾಗದ ವ್ಯಾಪ್ತಿಯಲ್ಲಿರುವ ಐದು ಲೆವೆಲ್ ಕ್ರಾಸಿಂಗ್ ತೆಗೆದುಹಾಕಲಾಗಿದೆ ಎಂದು ತಿಳಿಸಿದರು.


ವಿಭಾಗದ ಹಳಿಗಳಲ್ಲಿ ವೇಗವನ್ನು ಹೆಚ್ಚಿಸುವ ಪ್ರಯತ್ನದಲ್ಲಿ 119 ಕಿ.ಮೀ.ಗಳಷ್ಟು ಹಳಿಯಲ್ಲಿ ಗರಿಷ್ಠ ವೇಗವನ್ನು ಗಂಟೆಗೆ 110 ಕಿ.ಮೀ.ಗೆ ಏರಿಸಲಾಗಿದೆ. ಚಿಕ್ಕಜಾಜೂರು-ರಾಯದುರ್ಗ, ಹಾಸನ-ಸಕಲೇಶಪುರ ನಡುವಿನ 172 ಕಿಮೀಗಳಷ್ಟು ಲೂಪ್‌ಲೈನ್‌ನಲ್ಲಿ ವೇಗವನ್ನು 15 ಕಿ.ಮೀ.ನಿಂದ 30 ಕಿ.ಮೀ.ಗೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.


ವೇಗದ, ಆರ್ಥಿಕ ಸಹಕಾರಿ, ಪರಿಸರ ಪೂರಕ ಪ್ರಯಾಣಕ್ಕಾಗಿ ರೈಲ್ವೆಯು ವೇಗದ ವಿದ್ಯುದೀಕರಣ ಯೋಜನೆಗಳಿಗೆ ಬದ್ಧವಾಗಿದೆ. ಹೊಸದುರ್ಗ-ಬೀರೂರು, ಚಿಕ್ಕಜಾಜೂರು-ತೋಳಹುಣಸೆ, ಮೈಸೂರು-ಚಾಮರಾಜನಗರ, ಬೀರೂರು-ಅರಸೀಕೆರೆ-ಸಂಪಿಗೆರೋಡ್ ಮತ್ತು ಬೀರೂರು-ಮಸರಹಳ್ಳಿ ಭಾಗಗಳ ನಡುವೆ ಸುಮಾರು 275 ಕಿ.ಮೀ.ಗಳಷ್ಟು ವಿದ್ಯುದೀಕರಣ ಪೂರ್ಣಗೊಂಡಿದೆ. ವಿಭಾಗದಲ್ಲಿನ ಇತರ ವಿದ್ಯುದೀಕರಣ ಯೋಜನೆಗಳು ಪ್ರಗತಿಯಲ್ಲಿವೆ. ಡಿಸೆಂಬರ್ 2023ರೊಳಗೆ ಎಲ್ಲ ಬ್ರಾಡ್‌ಗೇಜ್ ಮಾರ್ಗಗಳನ್ನು ಸಂಪೂರ್ಣವಾಗಿ ವಿದ್ಯುದೀಕರಿಸಲಾಗುವುದು ಎಂದರು.

ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ.ಮಂಜುನಾಥ್ ಕನಮಡಿ ಸೇರಿದಂತೆ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net