

ಮೈಸೂರು: ನಿರ್ಮಾಣದ ಹಂತದಲ್ಲಿರುವ ಮೈಸೂರು- ಬೆಂಗಳೂರು ಹೆದ್ದಾರಿಯನ್ನು ಉದ್ಘಾಟನೆ ಮಾಡುತ್ತಿರುವ ಬಿಜೆಪಿ ಸರ್ಕಾರ ಚುನಾವಣಾ ಪ್ರಚಾರ ಪಡೆಯಲು ಇಂತಹ ಕೀಳು ಮಟ್ಟಕ್ಕೆ ಇಳಿದಿದ್ದು, ಇವರ ಪ್ರಚಾರದ ಹುಚ್ಚಿನಿಂದ ಜನರಿಗೆ ಅಪಾಯ ಉಂಟಾಗುವ ಸಂಭವವಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆರೋಪಿಸಿದರು.
ಮೈಸೂರು ತಾಲೂಕಿನ ಸಿದ್ದಲಿಂಗಪುರ ಹಾಗೂ ನಾಗನಹಳ್ಳಿ ಸಮೀಪದಲ್ಲಿ ಪ್ರಗತಿಯಲ್ಲಿರುವ ಹೆದ್ದಾರಿಯ ಕಾಮಗಾರಿಯನ್ನು ಶುಕ್ರವಾರ ವೀಕ್ಷಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
118 ಕಿ.ಮೀ.ನಲ್ಲಿ ಅಲ್ಲಲ್ಲಿ ಸೇರಿ ಒಟ್ಟು 22 ಕಿ.ಮೀ. ಕೆಲಸವೇ ಇನ್ನೂ ಮುಗಿದಿಲ್ಲ. ಇದು ಪೂರ್ಣಗೊಳ್ಳಲು 6-7 ತಿಂಗಳು ಬೇಕು. ಸಿದ್ದಲಿಂಗಪುರದಲ್ಲಿ ಚರಂಡಿ ಇತ್ತು. ಅದನ್ನು ಮುಚ್ಚಿ ಹಾಕಲಾಗಿದೆ. ಇದರಿಂದ ಆ ನೀರು ಹೆದ್ದಾರಿಯಲ್ಲೇ ಹರಿಯುತ್ತಿದೆ. ರೈತರು ಜಮೀನುಗಳಿಗೆ ತೆರಳಲು ಪರ್ಯಾಯ ವ್ಯವಸ್ಥೆಯನ್ನೇ ಮಾಡಿಲ್ಲ. ಸೇವಾ ರಸ್ತೆಗಳಲ್ಲಿ ಸುರಕ್ಷತೆಯೇ ಇಲ್ಲ. ಆದರೂ ಚುನಾವಣೆಯ ಲಾಭ ಪಡೆಯುವುದಕ್ಕಾಗಿ ಆತುರದಲ್ಲಿ ಉದ್ಘಾಟಿಸಲಾಗುತ್ತಿದೆ. ಪ್ರಧಾನಿಗೆ ತಪ್ಪು ಮಾಹಿತಿ ಕೊಡುವ ಕೆಲಸವನ್ನು ಬಿಜೆಪಿಯವರು ಮಾಡಬಾರದು ಎಂದರು.
ನಮ್ಮ ನಿರ್ಧಾರ ಹಾಗೂ ನೀವು ಮಾಡಿದ ಕೆಲಸಗಳೆರಡನ್ನೂ ಜನರ ಮುಂದೆ ಹೇಳಬೇಕು. ಅದನ್ನು ಬಿಟ್ಟು ತಾವಷ್ಟೇ ಯೋಜನೆಯ ಕ್ರೆಡಿಟ್ ಪಡೆದುಕೊಳ್ಳುವುದು ಸಮಂಜಸವಲ್ಲ. ಮೈಸೂರು ವ್ಯಾಪ್ತಿಯಲ್ಲಿ ಏಳು ಕಿ.ಮೀ. ಮಾತ್ರವೇ ಇಲ್ಲಿನ ಸಂಸದರಿಗೆ ಬರುತ್ತದೆ. ಆದರೆ, ಎಲ್ಲವನ್ನೂ ನಾನೇ ಮಾಡಿಸಿದ್ದು ಎಂದು ಹೇಳುತ್ತಿದ್ದಾರೆ.
ನರಿಯಂತೆ ಮಾತನಾಡಬೇಡಿ. ರಾಜಕೀಯ ಭಾಷಣವನ್ನು ಸರಿಯಾಗಿ ಮಾಡಿ. ಕೆಲಸ ಮಾಡಿದವರನ್ನು ಶ್ಲಾಘಿಸಿ. ಟೀಕೆಯನ್ನು ಆರೋಗ್ಯಕರವಾಗಿ ಮಾಡಿ. ರಾಜಕೀಯ ಲಾಭ ಪಡೆಯಲು ಸುಳ್ಳು ಹೇಳುವುದನ್ನು ನಿಲ್ಲಿಸಿ ಎಂದು ಸಂಸದ ಪ್ರತಾಪ ಸಿಂಹ ವಿರುದ್ಧ ಹರಿಹಾಯ್ದರು.