

ಮೈಸೂರು: ಮೈಸೂರು-ಬೆಂಗಳೂರು ನಡುವಿನ ರೈಲ್ವೆ ಟ್ರ್ಯಾಕ್ ನಿರ್ವಹಣೆ ಬಗ್ಗೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮೆಚ್ಚುಗೆ ವ್ಯಕ್ತಪಡಿಸಿ ಟ್ವಿಟರ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
ಮೈಸೂರು-ಬೆಂಗಳೂರಿನ ಸಂಚಾರ ಅತಿ ಸೂಕ್ಷ್ಮ ಹಾಗೂ ಸರಳವಾಗಿದೆ. ಅತಿ ವೇಗವಾಗಿ ಚಲಿಸುವ ರೈಲಿನಲ್ಲಿ ಒಂದು ಗ್ಲಾಸ್ ನೀರು ಇಟ್ಟರೆ ಒಂದು ಹನಿ ಸಹ ಹೊರ ಬೀಳುವುದಿಲ್ಲ, ಅಷ್ಟು ಸರಾಗವಾಗಿ ಪ್ರಯಾಣಿಸಬಹುದಾಗಿದೆ. ಅಷ್ಟರಮಟ್ಟಿಗೆ ಉತ್ತಮವಾಗಿ ರೈಲ್ವೆ ಟ್ರ್ಯಾಕ್ ನಿರ್ವಹಣೆಯಾಗಿದೆ ಎಂದು ಪ್ರಶಂಸೆವ್ಯಕ್ತಪಡಿಸಿದ್ದಾರೆ.
ಡಿಆರ್‌ಎಂ ತಪಾಸಣೆ
ಮೂರು-ನಾಲ್ಕು ತಿಂಗಳಿಂದ ಬೆಂಗಳೂರು ಮತ್ತು ಮೈಸೂರು ರೈಲ್ವೆ ಟ್ರ್ಯಾಕ್‌ನಲ್ಲಿ ಸ್ವಲ್ಪ ನಿರ್ವಹಣೆ ಮಾಡಲಾಗಿತ್ತು. ಈ ಸಂಬಂಧ ರೈಲ್ವೆ ಇಲಾಖೆಯ ಬೆಂಗಳೂರು ವಿಭಾಗದ ಡಿಆರ್‌ಎಂ ಅಶೋಕ್‌ಕುಮಾರ್ ವರ್ಮಾ ಗುರುವಾರ ಗೋಲ್‌ಗುಂಬಜ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಗಳೂರಿನ ಕ್ರಾಂತಿಕಾರಿ ಸಂಗೊಳ್ಳಿ ರಾಯಣ ರೈಲ್ವೆ ನಿಲ್ದಾಣದಿಂದ ಮೈಸೂರು ರೈಲ್ವೆ ನಿಲ್ದಾಣದವರೆಗೂ ಟ್ರ್ಯಾಕ್ ಪರಿಶೀಲನೆ ನಡೆಸಿದ್ದರು.
ಈ ವೇಳೆ ಸಂಗೊಳ್ಳಿ ರಾಯಣ ರೈಲ್ವೆ ನಿಲ್ದಾಣದಲ್ಲಿಯೇ ಒಂದು ಗ್ಲಾಸ್‌ನಲ್ಲಿ ನೀರನ್ನು ತುಂಬಿ ರೈಲಿನ ಕೊನೆ ಬೋಗಿಯಲ್ಲಿ ಇಟ್ಟಿದ್ದರು. ರೈಲು ಗಾಡಿ ಗಂಟೆಗೆ 100 ಕಿ.ಮೀ. ವೇಗದಲ್ಲಿ ಮೈಸೂರು ತಲುಪಿದರೂ ಒಂದು ಹನಿ ನೀರು ಚೆಲ್ಲಿರಲಿಲ್ಲ. ಇದನ್ನು ವಿಡಿಯೋ ಮಾಡಿ, ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಅಶೋಕ್‌ಕುಮಾರ್ ವರ್ಮಾ ವರದಿ ಸಹಿತಿ ನೀಡಿದ್ದರು.
ಈ ಸಂಬಂಧ ಟ್ವಿಟ್ ಮಾಡಿರುವ ಪಿಯೂಷ್ ಗೋಯಲ್ ಈ ರೀತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಕುರಿತ ಪ್ರಯೋಗದ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಾಕಿ ನಿರ್ವಹಣೆ ಫಲಿತಾಂಶ ನೀವೆ ನೋಡಿ ಎಂದು ತಿಳಿಸಿದ್ದಾರೆ.