

ನಗರದ ಹೊರವಲಯದ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾತಗಳ್ಳಿ, ಹಂಚ್ಯಾ ಬಡಾವಣೆ, ಮಾನಸಿನಗರ, ಕೆ.ಬಿ.ಎಲ್., ವಸಂತನಗರ, ಸರ್ದಾರ್ ವಲ್ಲಬಾಯಿ ಪಟೇಲ್ ನಗರ ಸೇರಿದಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಡಾವಣೆಗಳಿಗೆ ಕುಡಿಯುವ ನೀರು ಒದಗಿಸಲು ಮೇಳಾಪುರ ಯೋಜನೆಯನ್ನು ತ್ವರಿತವಾಗಿ ಮುಗಿಸಬೇಕು. ಎಲ್ಲ ಬಡಾವಣೆಗಳಿಗೆ ಕುಡಿಯುವ ನೀರನ್ನು ಸಮಪರ್ಕವಾಗಿ ಒದಗಿಸಲು ಕಾಮಗಾರಿಯನ್ನು ಶೀಘ್ರವಾಗಿ ಮುಗಿಸುವಂತೆ ಶಾಸಕ ಜಿ.ಟಿ.ದೇವೇಗೌಡ ಸೂಚಿಸಿದರು.
ಬುಧವಾರ ನಗರಪಾಲಿಕೆ, ಮುಡಾ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳ ಸಭೆಯಲ್ಲಿ ಹೊರವಲಯದ ಬಡಾವಣೆಗಳಿಗೆ ನೀರು ಒದಗಿಸುವ ಕುರಿತು ಚರ್ಚಿಸಿ ಬಳಿಕ ಕೆಲವು ಸೂಚನೆಗಳನ್ನು ನೀಡಿದರು.
ಮೈಸೂರು ನಗರದ ಪಾಲಿಕೆ, ಸ್ಥಳೀಯ ಸಂಸ್ಥೆಗಳು, ಎಂಡಿಎ ಬಡಾವಣೆಗಳು, ಖಾಸಗಿ ಬಡಾವಣೆಗಳಿಗೆ ಸಮರ್ಪಕ ನೀರು ಒದಗಿಸಬೇಕಿದೆ. ನಾವು ಮೊದಲು ನೀರು ಕೊಡಬೇಕು. ಮೇಳಾಪುರದಿಂದ ನಗರಕ್ಕೆ ಪೂರೈಕೆಯಾಗುತ್ತಿರುವ ನೀರಿನಲ್ಲಿ ಕೆಲವು ಪ್ರದೇಶಗಳಿಗೆ ಕೊಡಬೇಕು. ಅಮೃತ್-2 ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಹೇಳಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಆಸಿಫ್ ಮಾತನಾಡಿ, ಮೇಳಾಪುರದಿಂದ ಜರ್ಮನ್ ಪ್ರೆಸ್‌ಗೆ ನೀರು ಪೂರೈಕೆಯಾಗುತ್ತಿದೆ. ಅಲ್ಲಿಂದ ರಮ್ಮನಹಳ್ಳಿ, ವಸಂತನಗರ, ಪೊಲೀಸ್ ಲೇಔಟ್, ನಾಡಹನಹಳ್ಳಿ, ಕೆಬಿಲ್ ಲೇಔಟ್‌ಗೆ ನೀರು ಕೊಡಬೇಕಿದೆ. ಈಗ ರಮ್ಮನಹಳ್ಳಿಯಲ್ಲಿ ಅಳವಡಿಸಿರುವ ಟ್ಯಾಂಕ್‌ಗೆ ಪೈಪ್‌ಲೈನ್ ಕಾಮಗಾರಿ ಆಗಿದೆ. ಸಣ್ಣಪುಟ್ಟ ಕಾಮಗಾರಿ ಮುಗಿದರೆ ನೀರು ಒದಗಿಸಬಹುದು ಎಂದರು. ಅದೇ ರೀತಿ ಬೇರೆ ಬೇರೆ ಭಾಗಗಳಿಗೆ ನೀರು ಕೊಡಲು ಎಂಡಿಎ ಮತ್ತು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಜಂಟಿ ಡಿಪಿಆರ್ ತಯಾರಿಸಲಾಗುವುದು. ಡಿಪಿಆರ್‌ನ್ನು ಎಂಡಿಎಗೆ ಕೊಡಲಾಗುವುದು ಎಂದರು.
ಬಳಿಕ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ರಮ್ಮನಹಳ್ಳಿಯಿಂದ ಬೇರೆ ಬೇರೆ ಪ್ರದೇಶಗಳಿಗೆ ನೀರು ತಲುಪಲು ಡಿಪಿಆರ್ ತಯಾರಿಸಿ ಸಲ್ಲಿಸಿದರೆ ಎಂಡಿಎ ಸಭೆಯಲ್ಲಿ ಚರ್ಚಿಸಿ ಅಗತ್ಯವಿರುವ ಅನುಮೋದನೆ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ಎಂಡಿಎ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಾದ ಮಹೇಶ್, ನಾಗೇಶ್, ಆಶಿಫ್, ಮೋಹನ್, ನಟೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವಿ ಕೀರ್ತಿ ಮತ್ತಿತರರು ಹಾಜರಿದ್ದರು.