ಮೇಕೆದಾಟು ಅನುಷ್ಠಾನ ವಿಳಂಬ: ಸರ್ಕಾರದ ಧೋರಣೆಗೆ ಖಂಡನೆ ರೈತ ಸಂಘದಿಂದ ಆ.18ರಂದು ಬೈಕ್ ರ‌್ಯಾಲಿ

12-cpt-5pb 22
Published on

ಚನ್ನಪಟ್ಟಣ :  ಮೇಕೆದಾಟು ಅಣೆಕಟ್ಟೆ ಯೋಜನೆಗೆ ಅನಗತ್ಯ ವಿಳಂಬ ಮಾಡುತ್ತಿರುವ ಸರ್ಕಾರದ ಧೋರಣೆ ಖಂಡಿಸಿ ಹಾಗೂ ಅಣೆಕಟ್ಟು ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತಸಂಘದ ವತಿಯಿಂದ ಆ.18ರಂದು ಬೈಕ್‌ರ‌್ಯಾಲಿ ಆಯೋಜಿಸಲಾಗಿದೆ ಎಂದು ಸಂಘದ ವಿಭಾಗೀಯ ಉಪಾಧ್ಯಕ್ಷ ಕೆ.ಮಲ್ಲಯ್ಯ ತಿಳಿಸಿದರು.

ನಗರದ ಜೆ.ಸಿ.ರಸ್ತೆಯಲ್ಲಿರುವ ತಾಲೂಕು ರೈತಸಂಘದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಲವು ವರ್ಷಗಳಿಂದ ರಾಜಕೀಯ ಪಕ್ಷಗಳು ಮೇಕೆದಾಟು ಅಣೆಕಟ್ಟೆ ನಿರ್ಮಿಸುವುದಾಗಿ ಹೇಳುತ್ತಲೇ ಬಂದಿವೆ. ಆದರೆ, ಅವೆಲ್ಲವೂ ೋಷಣೆಯಾಗಿಯೇ ಉಳಿದಿದೆ. ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಂಡಿಲ್ಲ. ಅಣೆಕಟ್ಟಿನ ವಿಚಾರದಲ್ಲಿ ನೆರೆಯ ತಮಿಳುನಾಡು ಖ್ಯಾತೆ ತೆಗೆಯುತ್ತಿದೆ. ಮತ್ತೊಂದೆಡೆ ಕೇಂದ್ರ ಸರ್ಕಾರ ಕೂಡ ಯೋಜನೆಗೆ ಅಡ್ಡಗಾಲು ಹಾಕುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯೋಜನೆ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ರಾಮನಗರದ ಮಿನಿವಿಧಾನಸೌಧದಿಂದ ಸಂಗಮದವರೆಗೆ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ. ರಾಮನಗರ, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಂದಲೂ ರೈತಸಂಘದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ರ‌್ಯಾಲಿಗೆ ಕನ್ನಡ ಪರ ಸಂಘಟನೆಗಳು, ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ಸಮಾನ ಮನಸ್ಕರು ಬೆಂಬಲ ನೀಡಿದ್ದಾರೆ ಎಂದರು.

ಯೋಜನೆ ಅನುಷ್ಠಾನಕ್ಕೆ ಮೀನಮೇಷ ಏಕೆ? :  ರಾಜ್ಯದ ಜನರ ಹಾಗೂ ರೈತರ ಹಿತದೃಷ್ಟಿಯಿಂದ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ ಅಣೆಕಟ್ಟೆಯನ್ನು ನಿರ್ಮಾಣ ಮಾಡಲೇಬೇಕು. ಈಗಾಗಲೇ ನ್ಯಾಯಾಲಯ ಕಾವೇರಿ ಅಂತಿಮ ತೀರ್ಪಿನಲ್ಲಿ ರಾಜ್ಯ ಬಳಕೆ ಮಾಡಿಕೊಳ್ಳಬೇಕಾದ ನೀರಿನ ಪ್ರಮಾಣವನ್ನು ಸ್ಪಷ್ಟಪಡಿಸಿದೆ. ಹಸಿರು ನ್ಯಾಯಾಧಿಕರಣ ಸಹ ಯೋಜನೆಗೆ ಸಮ್ಮತಿ ನೀಡಿದೆ. ನೀಲಿ ನಕ್ಷೆ ಸಿದ್ಧಪಡಿಸಿರುವ ರಾಜ್ಯ ಸರ್ಕಾರ ಕಾಮಗಾರಿ ಆರಂಭಿಸಲು ಮೀನಮೇಷ ಎಣಿಸುತ್ತಿರುವುದು ಏತಕ್ಕೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸಿಂ.ಲಿಂ.ನಾಗರಾಜು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net