ಮೃತದೇಹ ದಹಿಸದೆ ಸಮಾಧಿ ಮಾಡಲಾಗುವುದು: ಹುಬ್ಬಳ್ಳಿ ಎನ್‌ಕೌಂಟರ್ ಪ್ರಕರಣ ಹೈಕೋರ್ಟ್‌ಗೆ ಸರ್ಕಾರ ಮಾಹಿತಿ

highcourt
Published on

 ಬೆಂಗಳೂರು:  ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯನ್ನು ಕೊಲೆ ಮಾಡಿದ್ದ ಆರೋಪದಲ್ಲಿ ಪೊಲೀಸರ ಎನ್‌ಕೌಂಟರ್‌ಗೆ ಗುರಿಯಾಗಿದ್ದ ರಿತೇಶ್‌ಕುಮಾರ್ ಮೃತದೇಹವನ್ನು ದಹನ ಮಾಡದೆ ಸಮಾಧಿ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಈ ಸಂಬಂಧ ಮಾನವ ಹಕ್ಕುಗಳ ಪರ ಹೋರಾಡುತ್ತಿರುವ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಸಂಘಟನೆ ಮತ್ತು ಡಾ.ಮಧು ಭೂಷಣ್ ಎಂಬುವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಆದಿತ್ಯಾ ಸೋಂಧಿ, ರಿತೇಶ್ ಮೃತದೇಹದ ಅಂತ್ಯಕ್ರಿಯೆಯನ್ನು ಮಂಗಳವಾರ ನಡೆಸುವ ಸಾಧ್ಯತೆಯಿದೆ. ಆದರೆ, ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ ತನಿಖೆಗೆ ಅನುಕೂಲವಾಗುವ ದೃಷ್ಟಿಯಿಂದ ಬೆರಳಚ್ಚು, ಕೂದಲು ಸೇರಿ ಮೃತದೇಹದ ಇನ್ನಿತರ ಭಾಗಗಳನ್ನು ಸಂರಕ್ಷಣೆ ಮಾಡಬೇಕಿದೆ. ಆದ್ದರಿಂದ ಶವಸಂಸ್ಕಾರ ನಡೆಸುವುದಕ್ಕೆ ತಡೆ ನೀಡಬೇಕು ಎಂದು ಕೋರಿದರು.

ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೋಕೇಡ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಮೃತ ದೇಹವನ್ನು ಇನ್ನೂ ಕುಟುಂಬಸ್ಥರು ಗುರುತಿಸಿಲ್ಲ. ಹೀಗಾಗಿ ತಕ್ಷಣಕ್ಕೆ ಅಂತ್ಯಕ್ರಿಯೆ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಈ ರೀತಿಯ ಪ್ರಕರಣಗಳಲ್ಲಿ ಮೃತದೇಹವನ್ನು ದಹನ ಮಾಡುವುದಿಲ್ಲ. ಬದಲಿಗೆ ಮುಂದಿನ ತನಿಖೆಗೆ ನೆರವಾಗಬೇಕು ಎಂಬ ಕಾರಣದಿಂದ ಸಮಾಧಿ ಮಾಡಲಾಗುವುದು. ಆಗ ತನಿಖೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ತಿಳಿಸಿದರು. ಜತೆಗೆ ಪ್ರಕರಣ ಸಂಬಂಧ ಎ್ಐಆರ್ ದಾಖಲಿಸಿ, ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ತಿಳಿಸಿದರು.

ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ, ಮರೋತ್ತರ ಪರೀಕ್ಷೆ ನಡೆಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಹಲವು ನಿರ್ದೇಶನ ನೀಡಿದೆ. ಅದರಂತೆ ಸ್ಥಳೀಯ ಜಿಲ್ಲಾಸ್ಪತ್ರೆಯ ಇಬ್ಬರು ವೈದ್ಯರನ್ನು ಒಳಗೊಂಡ ತಂಡವು ರಿತೇಶ್‌ಕುಮಾರ್ ಮತ್ತು ಸಂತ್ರಸ್ತೆಯ ಬಾಲಕಿಯ ಪರೀಕ್ಷೆ ನಡೆಸಬೇಕು. ಮರಣೋತ್ತರ ಪರೀಕ್ಷೆಯ ಸಂಪೂರ್ಣ ಅವಧಿಯವರೆಗೆ ವೀಡಿಯೊ ಚಿತ್ರೀಕರಣ ಕೈಗೊಳ್ಳಬೇಕು ಮತ್ತು ಅಧಿಕಾರಿಗಳು ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಸಂಗ್ರಹಿಸಲಾದ ದೇಹದ ಭಾಗಗಳ ಮಾದರಿಗಳನ್ನು ಸಂರಕ್ಷಿಸಬೇಕು, ಅಗತ್ಯವಿದ್ದರೆ ತನಿಖೆಗೆ ಲಭ್ಯವಾಗುವಂತೆ ಮಾಡಬೇಕು. ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. ಜತೆಗೆ ಪ್ರಕರಣ ಸಂಬಂಧ ಸಂಪೂರ್ಣ ವಿವರಣೆ ನೀಡುವಂತೆ ಸೂಚನೆ ನೀಡಿ ವಿಚಾರಣೆ ಏ.23ಕ್ಕೆ ಮುಂದೂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net