ಮೂವರು ಬೈಕ್ ಕಳ್ಳರ ಬಂಧನ

Published on

ವಿಜಯಪುರ: ನಗರದ ವಿವಿಧ ಸ್ಥಳಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ ಹೇಳಿದರು.

ವಿಜಯಪುರ ನಗರದ ಬಾಗಾಯತ್ ಗಲ್ಲಿ ನಿವಾಸಿ ತೌಸೀಫ್ ಮಹಿಬೂಬ ಕಲಾದಗಿ (25), ಚಟ್ಟರಕಿ ಗ್ರಾಮದ ಸಮೀರ ಉಸ್ಮಾನಸಾಬ ಬಳಗಾನೂರ (24) ಹಾಗೂ ಇಂಡಿ ತಾಲೂಕಿನ ಶಿರಶ್ಯಾಡ ಗ್ರಾಮದ ಹಾಲಿ ಸಿಂದಗಿ ವಿದ್ಯಾನಗರ ನಿವಾಸಿ ಸುನೀಲ ಮಲ್ಲನಗೌಡ ಬಿರಾದಾರ (20) ಬಂಧಿತರು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಜಯಪುರದ ಗಾಂಧಿಚೌಕ್, ಆದರ್ಶನಗರ, ಎಪಿಎಂಸಿ, ಗೋಳಗುಮ್ಮಟ ಠಾಣೆ ಹಾಗೂ ಜಿಲ್ಲೆಯ ಇಂಡಿ, ಸಿಂದಗಿ, ಬಸವನಬಾಗೇವಾಡಿ ಹಾಗೂ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ಬೈಕ್ ಕದ್ದಿದ್ದು, ಒಟ್ಟು 21.60 ಲಕ್ಷ ರೂ.ಮೌಲ್ಯದ 36 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ನಗರದಲ್ಲಿ ನಡೆಯುತ್ತಿರುವ ಬೈಕ್ ಕಳ್ಳತನ ಪ್ರಕರಣವನ್ನು ಭೇದಿಸಲು ಹೆಚ್ಚುವರಿ ಎಸ್‌ಪಿ ರಾಮ ಅರಸಿದ್ದಿ, ಡಿವೈಎಸ್ಪಿ ಕೆ.ಸಿ.ಲಕ್ಷ್ಮ್ಮೀನಾರಾಯಣ ಮಾರ್ಗದರ್ಶನದಲ್ಲಿ ಶಹರ ಠಾಣೆ ಸಿಪಿಐ ರವೀಂದ್ರ ನಾಯ್ಕೋಡಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಲು ಮಹಾರಾಷ್ಟ್ರದ ಸೊಲ್ಲಾಪುರ, ಮಿರಜ್, ಸಾಂಗಲಿ, ಪುಣೆ, ಮುಂಬಯಿ, ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ, ಕಲಬುರಗಿ ಜಿಲ್ಲೆಗಳಲ್ಲಿ ತೆರಳಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು. ಶಹರ ಠಾಣೆ ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್‌ಐ ಆರ್.ಮುಶಾಪೀರ, ಅಪರಾಧ ವಿಭಾಗದ ಪಿಎಸ್‌ಐ ಆರ್.ಬಿ. ಕೂಡಗಿ, ಎಎಸ್‌ಐ ಎಸ್.ಬಿ. ಚನಶೆಟ್ಟಿ, ಸಿಬ್ಬಂದಿ ಬಾಬು ಗುಡಿಮನಿ, ಎಚ್.ಎಚ್. ಜಮಾದಾರ, ಶಿವಾನಂದ ಅಳ್ಳಿಗಿಡದ, ಬಶೀರ ಅಹ್ಮದ್ ಶೇಖ್, ಎನ್.ಕೆ. ಮುಲ್ಲಾ, ರಾಮನಗೌಡ ಬಿರಾದಾರ, ಬಸವರಾಜ ದಿನ್ನಿ, ಎಸ್.ವಿ. ಜೋಗಿನ, ಆನಂದ ಯಳ್ಳಗಿ, ಸುನೀಲ ಗೌಳಿ, ಗುಂಡು ಗಿರಣಿವಡ್ಡರ, ಮತೀನ್ ಬಾಗವಾನ ಇದ್ದರು.

ಹಳ್ಳಿಗಳಲ್ಲಿ ಮುಗ್ಧ ಜನರನ್ನು ಯಾಮಾರಿಸಿ ಕಳುವು ಮಾಡಿದ್ದ ಬೈಕ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕಳ್ಳತನದ ವಸ್ತುಗಳನ್ನು ಖರೀದಿಸುವವರು ದಾಖಲೆಗಳನ್ನು ಪರಿಶೀಲನೆ ಮಾಡಿ ಖರೀದಿಸಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಅಪರಾಧವಾಗುತ್ತದೆ.
ಎಚ್.ಡಿ.ಆನಂದಕುಮಾರ, ಎಸ್‌ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net